ಬಂಟ್ವಾಳ: ಪಾಣೆಮಂಗಳೂರು ನರಹರಿ ಪರ್ವತದಲ್ಲಿ ಆ.14ರಂದು ಆಟಿ ಅಮವಾಸ್ಯೆ ತೀರ್ಥಸ್ನಾನ ಜರಗಿತು.

ಬೋರ್ಗರೆದು ಮುನ್ನುಗುತ್ತಿರುವ ಕಡಲಿನ ಅಬ್ಬರದ ತೆರೆಗಳಿಗೆ ಕೈಯಿಂದಲೇ ತಡೆದು ನಿಲ್ಲಿಸಿ ಹಿಂದೆ ಸರಿ ಎಂದು ಅಜ್ಞಾಪಿಸಿ ಕೊಡಲಿ ಎಸೆದಷ್ಟು ಹಿಂದಕ್ಕೆ ಕಡಲನ್ನು ಓಡಿಸಿದ ಪರಶುರಾಮ ನೀಡಿದ ಪುಣ್ಯಭೂಮಿಯ ಈ ತುಳುನಾಡಿನ ಭೂಲೋಕದ ಕೈಲಾಸ ಎಂದೇ ಪ್ರಸಿದ್ಧವಾಗಿರುವ ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಅತ್ಯಂತ ಸುಂದರ ಪ್ರಕೃತಿಯ ಸೌಂದರ್ಯದ ತಾಣ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನ ಜರಗಿತು. ಇಂದು ಮುಂಜಾನೆ 5 ಗಂಟೆಯಿಂದಲೇ ಭಕ್ತರು ಅಮವಾಸ್ಯೆ ತೀರ್ಥಸ್ನಾನ ದಲ್ಲಿ ಭಾಗಿಯಾದರು.
ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ‘ಸಪ್ತವರ್ಣಿ’ ಪಾಲೆಯ ಮರದ ರಸವನ್ನು ಸುರ್ಯೋದಯದ ಮೊದಲು ಸೇವಿಸುವ ತುಳು ಪರಂಪರೆಯ ದಿನ ಆಟಿ ಅಮವ್ಯಾಸೆಯ ತೀರ್ಥ ಸ್ನಾನದ ಪವಿತ್ರ ದಿನ. ಮುಂಜಾನೆ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥಕೂಪದಲ್ಲಿ ಮಿಂದು ನಾಗದೇವರಿಗೆ, ವಿನಾಯಕ ದೇವರಿಗೆ, ಸದಾಶಿವ ದೇವರಿಗೆ, ಸೇವೆ ಸಲ್ಲಿಸಿ ಪುನೀತರಾದರು.








