ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ ಮೂರು ವರ್ಷಗಳಿಂದ ಪಿಡಿಒ ಆಗಿರುವ ಪಿ.ವೆಂಕಟೇಶ ಅವರು ತನ್ನ ಅವ್ಯವಹಾರ ಮತ್ತು ದುರ್ನಡತೆಯಿಂದ ಸುದ್ದಿಯಾಗುತ್ತಿರುವುದನ್ನು ಮುಚ್ಚಿಡಲು ಇದೀಗ ‘ಜಾತಿ ರಾಜಕಾರಣ’ ಆರಂಭಿಸಿದ್ದಾರೆ ಎಂದು ತಾ.ಪಂ.ಸದಸ್ಯ, ಕ್ಷೇತ್ರ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚ ಕಾರ್ಯದರ್ಶಿ ದಿನೇಶ ಅಮ್ಟೂರು ಆರೋಪಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಹಿತ ಯಾವುದೇ ಸದಸ್ಯರೊಂದಿಗೆ ಚರ್ಚಿಸದೆ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬದಲಾಗಿ ನೀರಿನ ಬಿಲ್ಲು ಪಾವತಿಸಿಲ್ಲ ಎಂಬ ನೆಪವೊಡ್ಡಿ ಏಕಾಯೇಕಿ ಪಂಪ್ಹೌಸ್ಗೆ ಬೀಗ ಜಡಿಯುವ ಮೂಲಕ ಅಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಮಾತ್ರವಲ್ಲದೆ ಪಂಚಾಯಿತಿ ಹೆಸರನ್ನು ಕೆಡಿಸುವ ಮೂಲಕ ಆಡಳಿತಾರೂಢ ಸದಸ್ಯರಿಗೆ ಮುಜುಗರ ಉಂಟು ಮಾಡಿದ್ದಾರೆ. ಈ ಪರಿಸರದಲ್ಲಿ ಕೂಡಾ ಪರಿಶಿಷ್ಟ ಜಾತಿಗೆ ಸೇರಿದ ಮನೆಗಳಿದ್ದರೂ ಆ ಬಗ್ಗೆ ಗಮನಿಸದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.25ರ ಅನುದಾನದಲ್ಲಿ ಮಂಜೂರಾದ ಕುಡಿಯುವ ನೀರಿನ ಟ್ಯಾಂಕ್ ವಿತರಣೆಗೂ ಲಂಚ ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಕೊಳವೆ ಬಾವಿ ಕೊರೆದು ಪಂಪ್ ಅಳವಡಿಸಲು ನಿರಾಕ್ಷೇಪನಾ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ 9/11 ಕಡತ ವಿಲೇವಾರಿಗೆ ಪ್ರತಿಯೊಬ್ಬರಿಂದಲೂ ಹಣ ಪಡೆಯುತ್ತಿರುವ ಇವರ ಉಪಟಳದಿಂದ ಪಂಚಾಯಿತಿನಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸಿದ್ದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸಿಬ್ಬಂದಿ ಕೆಲಸವನ್ನೇ ತೊರೆದ ಉದಾಹರಣೆಗಳಿವೆ. ಈ ಬಗ್ಗೆ ಪಿಡಿಒ ಅಥವಾ ಯಾವುದೇ ದಲಿತ ಸಂಘಟನೆಗಳು ಚಕಾರ ಎತ್ತಿಲ್ಲ ಎಂದು ಟೀಕಿಸಿದರು. ಇವರ ಅವ್ಯವಹಾರ ಮತ್ತು ದುರ್ನಡತೆ ಬಗ್ಗೆ ಈಗಾಗಲೇ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿದ್ದು, ಎಲ್ಲಿಯೂ ಅವರ ಜಾತಿ ಬಗ್ಗೆ ಉಲ್ಲೇಖಿಸಿಲ್ಲ. ಇದೀಗ ದಲಿತ ಸಂಘಟನೆಗಳು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿ ಮೂಲಕವೇ ನಮಗೆ ಅವರ ಜಾತಿ ಬಗ್ಗೆ ತಿಳಿದಿದೆ ಎಂದು ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಮತ್ತು ವಿಸ್ತರಣಾಧಿಕಾರಿ ಜೀವನ್ ಮತ್ತಿತರ ಅಧಿಕಾರಿಗಳು ಪಂಚಾಯಿತಿಗೆ ಭೇಟಿ ನೀಡಿ ಕಡತ ಪರಿಶೀಲನೆ ನಡೆಸುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿನ ಮಾಜಿ ಮಹಿಳಾ ಅಧ್ಯಕ್ಷೆ ಮನೆಗೆ ಹೋಗಿ ಆರು ತಿಂಗಳ ಹಿಂದಿನ ಕಡತಗಳಿಗೆ ಸಹಿ ಹಾಕಿಸಿಕೊಂಡು ಬಂದಿರುವುದು ಇವರ ಅವ್ಯವಹಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇದೇ ರೀತಿ ಮುಂದುವರಿದಲ್ಲಿ ಪಿಡಿಒ ವರ್ಗಾವಣೆಗೆ ಆಗ್ರಹಿಸಿ ರಾಯಿ ಮತ್ತು ಕೊಯಿಲ ನಾಗರಿಕರೊಂದಿಗೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಲ್ಲದಿದ್ದಲ್ಲಿ ಅವರು ಪಿಡಿಒ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣ ಮಾಡಲಿ ಎಂದು ತಾ.ಪಂ.ಸದಸ್ಯ ದಿನೇಶ ಅಮ್ಟೂರು ಸವಾಲು ಹಾಕಿದರು.
ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ನಿರುಪಮಾ ಎಸ್.ಭಂಡಾರಿ, ಯಶೋಧ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
