ಬಂಟ್ವಾಳ : ಬದಲಾವಣೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಇಂದು ಬಡವರ ಭೂಮಿಗಳನ್ನು ಬಂಡವಾಳ ಶಾಹಿಗಳಿಗೆ, ಸಾಮ್ರಾಜ್ಯಶಾಹಿಗಳಿಗೆ ಒತ್ತೆ ನೀಡುವ ಮೂಲಕ ಋಣ ತೀರಿಸುತ್ತಿದೆ ಎಂದು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಮಂಡಳಿ ಜಿಲ್ಲಾ ಸದಸ್ಯ ಬಾಲಕೃಷ್ಣ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಪುರಸಭಾ ವ್ಯಾಪ್ತಿಯ ಬಡ ಜನರಿಗೆ ಹಕ್ಕು ಪತ್ರ ಮತ್ತು ಮನೆ ನಿವೇಶನಕ್ಕೆ ಆಗ್ರಹಿಸಿ ಸೋಮವಾರ ಇಲ್ಲಿನ ಪುರಸಭಾ ಕಛೇರಿಯ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ನಂತರ ಇದುವರೆಗೆ ಸುಮಾರು 1703 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ ಕೇಂದ್ರದ ಮಂತ್ರಿಗಳು ಬಡ ರೈತರ ಸಾವಿಗೆ ಇನ್ನಿಲ್ಲದ ಕಾರಣಗಳು ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಅದೇ ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗೆ ಸಂಬಂಧಿಸಿ ರಾಜ್ಯ ಬಿಜೆಪಿ ನಾಯಕರು ಇದು ಕಾಂಗ್ರೆಸ್ ಸರಕಾರದ ವೈಫಲ್ಯ ಎಂದು ಬಣ್ಣಿಸಿ ರೈತರ ಮನೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಈ ದ್ವಂದ್ವ ನೀತಿಯ ಮೂಲಕ ಬಿಜೆಪಿ ರಾಜಕಾರಣಿಗಳು ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲೂ ಪ್ರತಿದಿನ ಕನಿಷ್ಠ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಬಾಲಕೃಷ್ಣ ಶೆಟ್ಟಿ ಪುರಸಭಾ ವ್ಯಾಪ್ತಿಯ ಬಡವರಿಗೆ ತಿಂಗಳೊಳಗೆ ಹಕ್ಕು ಪತ್ರ ಹಾಗೂ ಮನೆ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪುರಸಭಾ ಕಛೇರಿ ಮುಂದೆ ಆಹೋ ರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಿಪಿಐ(ಎಂ) ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಸೀಮೆ ಎಣ್ಣೆಮುಕ್ತ ಬಂಟ್ವಾಳ ಹೆಸರಿನಲ್ಲಿ ಅಡುಗೆ ಅನಿಲ ಹೊಂದಿರದ ಬಡವರಿಗೆ ಉಚಿತ ಗ್ಯಾಸ್ ನೀಡುವುದಾಗಿ ಹೇಳಿ ಸೀಮೆ ಎಣ್ಣೆ ಪೂರೈಕೆಗೆ ಪೂರ್ಣ ವಿರಾಮ ಹಾಕಲಾಗಿದೆ. ಆದರೆ ಬಡವರಿಗೆ ಇತ್ತ ಉಚಿತ ಅಡುಗೆ ಅನಿಲವೂ ಇಲ್ಲ, ಅತ್ತ ಸೀಮೆ ಎಣ್ಣೆಯೂ ಸಿಗದಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದರು. ಈಗಾಗಲೇ ಪುರಸಭೆ ವ್ಯಾಪ್ತಿಯ ಸರಕಾರಿ ಜಮೀನಿನಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರ ಹಾಗೂ ಮನೆ ನಿವೇಶನಕ್ಕಾಗಿ ಹಲವು ಬಾರಿ ಮನವಿ ನೀಡಲಾಗಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಮಣ್ಣ ಆಕ್ರೊಶ ವ್ಯಕ್ತಪಡಿಸಿದರು.
ಪಕ್ಷ ಪ್ರಮುಖರಾದ ಬಿ ವಾಸುಗಟ್ಟಿ, ಸಂಜೀವ ಬಂಗೇರ, ಉದಯಕುಮಾರ್, ಬಿ ನಾರಾಯಣ, ಜನಾರ್ದನ ಕುಲಾಲ್, ಮುಹಮ್ಮದ್ ಹನೀಫ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಈಗಾಗಲೇ ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ 4.02 ಎಕ್ರೆ ಜಮೀನನ್ನು ನಿವೇಶನಕ್ಕಾಗಿ ಗುರುತಿಸಲಾಗಿದ್ದು, ಎಲ್ಲವೂ ಸುಸೂತ್ರವಾಗಿ ನಡೆದರೆ ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
