ಬಂಟ್ವಾಳ: ದೇಶದಲ್ಲಿ ಬದಲಾವಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡಲು ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳುವ ಮೂಲಕ ರೈತರ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ದಿನೇ ದಿನೇ ರೈತರ ಆತ್ಮಹತ್ಯೆ ಹೆಚ್ಚಳ ಬಗ್ಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎನ್ನುತ್ತಾ ದ್ವಂದ್ವ ನೀತಿ ಪ್ರದರ್ಶಿಸುತ್ತಿದ್ದಾರೆ ಎಂದು ಸಿಪಿಎಂ ಪಕ್ಷದ ಕಾರ್ಯದರ್ಶಿ ಮಂಡಳಿ ಜಿಲ್ಲಾ ಸದಸ್ಯ ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
10btl-Cpm
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಮನೆ ನಿವೇಶನ ನೀಡದಿರುವ ಬಗ್ಗೆ ಸಿಪಿಎಂ ಪಕ್ಷದ ವತಿಯಿಂದ ಸೋಮವಾರ ಪುರಸಭೆ ಎದುರು ನಡೆದ ದಿಢೀರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಮುಂದಿನ ಒಂದು ತಿಂಗಳೊಳಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಪಕ್ಷದ ತಾಲ್ಲೂಕು ಸಮಿತಿ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಇಲ್ಲಿನ ಪುರಸಭೆಯು ಸೀಮೆಎಣ್ಣೆ ಮುಕ್ತ ನಗರ ಮಾಡಲು ಹೋಗಿ ಬಹುತೇಕ ಮಂದಿ ಬಡವರಿಗೆ ಉಚಿತ ಗ್ಯಾಸ್ ನೀಡುವ ಭರವಸೆ ನೀಡಿತ್ತು. ಇದೀಗ ಅಡುಗೆ ಅನಿಲ ಮಾತ್ರವಲ್ಲದೆ ಇವರಿಗೆ ಸೀಮೆಎಣ್ಣೆಯೂ ಇಲ್ಲದೆ ಪರದಾಡುವಂತಾಗಿದೆ ಎಂದು ಟೀಕಿಸಿದರು.
ಪ್ರಮುಖರಾದ ಬಿ ವಾಸುಗಟ್ಟಿ, ಸಂಜೀವ ಬಂಗೇರ, ಉದಯಕುಮಾರ್, ಬಿ.ನಾರಾಯಣ, ಜನಾರ್ದನ ಕುಲಾಲ್, ಮುಹಮ್ಮದ್ ಹನೀಫ್, ಸರಸ್ವತಿ, ವಿಮಲ, ಜಾನಕಿ ಮತ್ತಿತರರು ಇದ್ದರು.
ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಪುರಸಭಾ ವ್ಯಾಪ್ತಿಯ ಪಲ್ಲಮಜಲು ಎಂಬಲ್ಲಿ 4.02 ಎಕ್ರೆ ಜಮೀನು ಕಾದಿರಿಸಲಾಗಿದ್ದು, ಸರ್ಕಾರವು ಕಂದಾಯ ಇಲಾಖೆ ಮೂಲಕ ಹಸ್ತಾಂತರಿಸಬೇಕಿದೆ ಎಂದರು.

By Suddi9

Leave a Reply

Your email address will not be published. Required fields are marked *