ಬಂಟ್ವಾಳ: ಆಟಿ ತಿಂಗಳಿನಲ್ಲಿ ಬರುವ ಆಟಿ ಕಳಂಜ ಹಿಂದಿನ ಕಾಲದಲ್ಲಿ ಆಪ್ತಸಮಾಲೋಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಜನರ ಕಷ್ಟಗಳಿಗೆ ಸಾಂತ್ವನ ನೀಡುವ ಮೂಲಕ ಸ್ಪಂದಿಸುತ್ತಿದ್ದ ಎಂದು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ. ಕುಲಾಲ್ ಅಭಿಪ್ರಾಯ ಪಟ್ಟರು.

ವೀರಕಂಬದ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇ. ಧ. ಗ್ರಾಮಾಭಿವೃದ್ದಿ ಯೋಜನೆಯ ವೀರಕಂಭ ಒಕ್ಕೂಟದ ಸಹಯೋಗದೊಂದಿಗೆ ನಡೆದ ಆಟಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ ಅವರು ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳವ ನಿಟ್ಟಿನಲ್ಲಿ ಆಟಿ ಆಚರಣೆ ಮಾಡಲಾಗುತ್ತಿದೆ. ತುಳು ಸಾಹಿತ್ಯ, ಭಾಷೆ, ಹಾಗೂ ಸಂಸ್ಕ್ರತಿಯ ರಕ್ಷಣೆಯ ಹಿತದೃಷ್ಟಿಯಿಂದ ಆಟಿ ಆಚರಣೆಯಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯ ಬೇಕು, ಆಟಿ ಆಚರಣೆಯ ನೆಪದಲ್ಲಾದರೂ ತುಳುನಾಡಿನ ಸಂಸ್ಕ್ರತಿಯ ಪರಿಚಯ ಮಾಡಿಕೊಳ್ಳುವ ಅವಕಾಶ ಈ ಮೂಲಕ ಸಿಗುತ್ತಿದೆ ಎಂದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ವೀರಕಂಭ ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ ರಾಗಿಕಲ್ಲು ಬೀಸಿ ಕಾರ್ಯಕ್ರಮ ಉದ್ಘಾಟಿಸಿದರು.ಜಿ.ಪಂ.ಸದಸ್ಯ ಎಂ. ಎಸ್ ಮಹಮ್ಮದ್, ಉಪಾಧ್ಯಕ್ಷ ನಿಶಾಂತ್ ರೈ, ಸದಸ್ಯ ರಾಮಚಂದ್ರ ಪ್ರಭು, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸೇವಾನಿರತೆ ಗಿರಿಜಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ಪೂಜಾರಿ ಸ್ವಾಗತಿಸಿ, ಸಹಶಿಕ್ಷಕಿ ಸಂಗೀತಾ ನಿರೂಪಿಸಿ ವಂದಿಸಿದರು.
ವಿದ್ಯಾರ್ಥಿಗಳು ತುಳುಗಾದೆ, ಒಗಟುಗಳನ್ನು ವಾಚಿಸಿದರು. ಜಾನಪದ ಹಾಡಿಗೆ ಹೆಜ್ಜೆ ಹಾಕಿದರು. ಮನೆಯಲ್ಲಿ ತಯಾರಿಸಿ ತಂದ ಬಗೆ ಬಗೆಯ ಕಾದ್ಯಗಳನ್ನು ಪ್ರದರ್ಶನಕ್ಕಿಟ್ಟರು. ಎಲ್ಲರೂ ಸೇರಿ ಭೋಜನ ಸವಿದರು.
