ಮೂಡುಬಿದಿರೆ:ನೂತನ ಮಾರುಕಟ್ಟೆಯಲ್ಲಿ ಪುರಸಭೆ ಈ ಹಿಂದೆ ಗುರುತಿಸಿದ್ದ ವ್ಯಾಪಾರಿಗಳ ಅನುಕೂಲಕ್ಕಾಗಿ ಅಂಗಡಿ ಕೋಣೆಗಳನ್ನು ಪ್ರತ್ಯೇಕ ಏಲಂ ಮೂಲಕ ನೀಡುವುದಕ್ಕೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತ್ತಾದರೂ ನಿರ್ವಹಣೆಯ ವೆಚ್ಚದ ಹಿನ್ನೆಲೆಯಲ್ಲಿ ಎ.ಸಿ ಮೀನುಮಾರುಕಟ್ಟೆಗೆ ಸಭೆಯಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಯಿತು.
ಪುರಸಬೆ ಅಧ್ಯಕ್ಷೆ ರೂಪಾ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೂತನ ಮಾರುಕಟ್ಟೆಯ ರೂಪುರೇಷೆಗಳ ಬಗ್ಗೆ ಮಾರುಕಟ್ಟೆಯ ಆರ್ಕೆಟ್ ಮಂಗಳೂರಿನ ಕುಮಾರ ಚಂದ್ರ ಎಂ.ಆರ್ ಸಭೆಗೆ ಮಾಹಿತಿ ನೀಡಿದರು. ಖಾಸಗಿ ಸಹಭಾಗಿತ್ವದಲ್ಲಿ 1.60 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸರಕಾರದ ಒಪ್ಪಿಗೆ ಸಿಕ್ಕಿದೆ. ಟೆಂಡರ್ ಪಡೆಯುವ ಖಾಸಗಿ ಸಂಸ್ಥೆ 2 ವರ್ಷ ಮಾರುಕಟ್ಟೆ ನಿರ್ಮಾಣದ ಅವಧಿ ಸೇರಿದಂತೆ ಒಟ್ಟು 17 ವರ್ಷಕ್ಕೆ ಲೀಸ್ಗೆ ಪಡೆಯಲಿದೆ.
29mdb1
ನೂತನ ಮಾರುಕಟ್ಟೆ 2 ಬೇಸ್ಮೆಂಟ್, 1 ಗ್ರೌಂಡ್ ಪ್ಲೋರ್ ಹಾಗೂ 3 ಮಹಡಿಗಳನ್ನೊಳಗೊಂಡಿರುತ್ತದೆ. ತರಕಾರಿ, ಮೀನು, ಮಟನ್ ಮಾರುಕಟ್ಟೆ ಗ್ರೌಂಡ್ ಪ್ಲೋರ್ನಲ್ಲಿ ಇರುತ್ತದೆ ಎಂದು ವಿವರಿಸಿದು. ಮಾರುಕಟ್ಟೆಯ ವಿನ್ಯಾಸ ಬಹುತೇಕ ಪಣಜಿ ಮಾರುಕಟ್ಟೆ ರಿತಿಯಲ್ಲಿರುತ್ತದೆ ಎಂದರು.
ಯೋಜನಾ ಪುಸ್ತಕ ಪುಟ 43ರಂತೆ ಈಗಿರುವ ವ್ಯಾಪಾರಿಗಳಿಗೆ ಪುರಸಭೆಯೆ ಪ್ರತ್ಯೇಕ ಟೆಂಡರ್ ಕರೆದು ಅವರಿಗೆ ಭಾಗವಹಿಸಲು ಅನುಕೂಲ ಕಲ್ಪಿಸಲಾಗುವುದು. ಉಳಿದ ಅಂಗಡಿ ಕೋಣೆಗಳನ್ನು ಖಾಸಗಿ ಗುತ್ತಿಗೆದಾರ ಪುರಸಭೆಯ ನಿಯಮಾವಳಿಯಂತೆ ಬಾಡಿಗೆ ಮತ್ತು ಠೇವಣಿಯನ್ನು ನಿಗದಿಪಡಿಸಿ ಟೆಂಡರ್ ಕರೆಯಲಿದ್ದಾರೆ ಎಂದು ಪುರಸಭೆ ಸದಸ್ಯ ಪಿ.ಕೆ ಥೋಮಸ್ ಸಭೆಗೆ ತಿಳಿಸಿದರು.

ಪುರಸಭೆ ಸೂಚಿಸಿದ ಸ್ಥಳದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮತ್ತು ಎರಡು ವರ್ಷದವರೆಗೆ ಬಾಡಿಗೆ ಪಡಕೊಳ್ಳುವ ಹಕ್ಕನ್ನು ಗುತ್ತಿಗೆದಾರನಿಗೆ ನೀಡಲಾಗಿದೆ. 17 ವರ್ಷ ಮುಗಿದ ನಂತರ ಮಾರುಕಟ್ಟೆಯನ್ನು ಪುರಸಭೆಗೆ ಹಸ್ತಾಂತರಿಸಲಾಗುವುದು. ಸುಮಾರು 26 ಕೋಟೆ ವೆಚ್ಚದ ಮಾರುಕಟ್ಟೆ ಟೆಂಡರ್ಗೆ ನಿಲ್ಲುವ ಗುತ್ತಿಗೆದಾರ 6.25 ಕೋಟಿ ರೂ ಠೇವಣಿಯಿಡಬೇಕಾಗಿದ್ದು ಟೆಂಡರ್ ಷರತ್ತು ಉಲ್ಲಂಘಿಸಿದಲ್ಲಿ ಆತನ ಗುತ್ತಿಗೆ ರದ್ದುಪಡಿಸಿ ನಷ್ಟವನ್ನು ಠೇವಣಿ ಹಣದಲ್ಲಿ ಕಡಿತಗೊಳಿಸುವ ಹಕ್ಕನ್ನು ಪುರಸಭೆ ಉಳಿಸಿಕೊಂಡಿದೆ.

ಹವಾನಿಯಂತ್ರಿತ ಮಾರುಕಟ್ಟೆ ಅನಿಶ್ಚಿತ:ಎ.ಸಿ ಮೀನು ಮಾರುಕಟ್ಟೆ ನಿರ್ಮಿಸುವುದಾದಲ್ಲಿ ಅದಕ್ಕೆಂದೆ ಪ್ರತ್ಯೇಕ ನೀಲ ನಕ್ಷೆ ತಯಾರಿಸುವುದು, ಸ್ಥಳವನ್ನು ಪ್ರತ್ಯೇಕಗೊಳಿಸುವುದು, ಪುರಸಭೆಗೆ ವಿದ್ಯುತ್ ಬಿಲ್ಲಿನ ಹೊರೆ ಇತ್ಯಾದಿ ಕಾರಣಗಳಿಗಾಗಿ ಎ.ಸಿ ಮೀನು ಮಾರುಕಟ್ಟೆಗೆ ಪುರಸಭೆಯಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ಮಾರುಕಟ್ಟೆಯ ವಿಷಯಗಳನ್ನು ಮುಂದಿನ ಸಭೆಯಲ್ಲಿ ನಿರ್ಣಯವಾಗಿ ಅಂಗೀಕರಿಸುವುದಾಗಿ ಮುಖ್ಯಾಧಿಕಾರಿ ಶೀನ ನಾಯ್ಕ್ ಸಭೆಗೆ ತಿಳಿಸಿದರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿಧನಕ್ಕೆ ಪುರಸಭೆ ಸಂತಾಪ ಸೂಚಿಸಿ ಸಭೆಯನ್ನು ಬುಧವಾರಕ್ಕೆ ಮುಂದೂಡಿತು.

By suddi9

Leave a Reply

Your email address will not be published. Required fields are marked *