ಮೂಡುಬಿದಿರೆ:ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಈದು ಗ್ರಾಮದ ವ್ಯಕ್ತಿಯೊಬ್ಬರ ವಿರುದ್ಧ ಸಾಲಗಾರ ನೀಡಿದ ದೂರಿನ ಮೇರೆಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ವಾಲ್ಪಾಡಿ ಗ್ರಾಮದ ಪ್ರವಿಣ್ ಕುಮಾರ್ ದೂರಿನ ಮೇರೆಗೆ ಈದುವಿನ ಜಯರಾಮ್ ಸಿ.ಹೆಚ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರವೀಣ್ ಎಂಬವರು ಮನೆ ನವೀಕರಣಕ್ಕೆಂದು 2013ರಲ್ಲಿ ಜಯರಾಮ್ ಅವರಿಂದ ರೂ 1 ಲಕ್ಷ ಸಾಲ ಪಡಕೊಂಡಿದ್ದರು. ಸಾಲಕ್ಕೆ ಆಧಾರವಾಗಿ ಇವರಿಂದ ಬಡ್ಡಿ ವ್ಯಾಪಾರಿ ಎರಡು ಖಾಲಿ ಚೆಕ್ ಹಾಳೆಗಳನ್ನು ಪಡಕೊಂಡಿದ್ದರೆನ್ನಲಾಗಿದೆ.

ಪ್ರವೀಣ್ ತಿಂಗಳಿಗೆ 8 ಸಾವಿರದಂತೆ ಒಂದು ವರ್ಷಕ್ಕೆ 96 ಸಾವಿರ ರೂ ಸಹಿತ ನಂತರದ ಕಂತಿನಲ್ಲಿ ಅಸಲು ಬಡ್ಡಿ ಸೇರಿದಂತೆ ಒಟ್ಟು ರೂ 1.76 ಲಕ್ಷ ಪಾವತಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಅಸಲಿನ ಮೊತ್ತ ರೂ 1 ಲಕ್ಷ ಇನ್ನೂ ಬಾಕಿಯಿದೆ ಎಂದು ಜಯರಾಮ್ ಬೇಡಿಕೆ ಇಟ್ಟು ಪ್ರವೀಣ್ ವಿರುದ್ಧ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರೆನ್ನಲಾಗಿದೆ. ಇದರ ವಿರುದ್ಧ ಪ್ರವೀಣ್ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದು ಪರವಾನಿಗೆ ಇಲ್ಲದೆ ಬಡ್ಡಿ ವ್ಯವಹಾರ ನಡೆಸಿದ ಆರೋಪದಲ್ಲಿ ಜಯರಾಮ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *