ಬಂಟ್ವಾಳ: ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸಿಬ್ಬಂದಿ ನೇಮಕಾತಿ ವೇಳೆ ಇದೇ ಪ್ರಥಮ ಬಾರಿಗೆ ಕ್ರೀಡಾಳುಗಳಿಗೆ ಮೀಸಲಾತಿ ಒದಗಿಸಲಾಗಿದ್ದು, ಗ್ರಾಮೀಣ ಕ್ರೀಡಾ ಸಾಧಕರಿಗೆ ಪ್ರತಿಭೆ ಅನಾವರಣಗೊಳಿಸಲು ಗ್ರಾಮೀಣ ಕ್ರೀಡಾಕೂಟ ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಾವಳಮೂಡೂರು ಯುವಕ ಮಂಡಲ ಸಹಕಾರದಲ್ಲಿ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಂಟ್ವಾಳ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಅರಣ್ಯ ಇಲಾಖೆ ವತಿಯಿಂದ ಅಖಿಲ ಭಾರತ ಮಟ್ಟದ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ನಡೆಸಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ಹಿದಾಯತ್ ಫೌಂಡೇಶನ್ ಕಾರ್ಯದರ್ಶಿ ಜಿ.ಮಹಮ್ಮದ್ ಹನೀಫ್ ಮತ್ತಿತರರು ಶುಭ ಹಾರೈಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಸದಸ್ಯರಾದ ಬಿ.ಪದ್ಮಶೇಖರ ಜೈನ್, ವಿನಯ ನಾಯಕ್, ಗ್ರಾ.ಪಂ.ಅಧ್ಯಕ್ಷ ಸಂತೋಷ್ ಪೂಂಜ, ಪಿಡಿಒ ವಿವೇಕಾನಂದ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ರಮೇಶ್ ನಾಯಕ್ ರಾಯಿ, ಕಾವಳಮೂಡೂರು ಯುವಕ ಮಂಡಲ ಅಧ್ಯಕ್ಷ ಪ್ರಮೋದ್ ಪಿ. ಮತ್ತಿತರರು ಇದ್ದರು. ಕ್ರೀಡಾಧಿಕಾರಿ ನವೀನ ಪಿ.ಎಸ್. ಸ್ವಾಗತಿಸಿ, ವಂದಿಸಿದರು. ದೈಹಿಕ ಶಿಕ್ಷಕ ಜಯರಾಮ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡೋತ್ಸವದಲ್ಲಿ ಸಾಮೂಹಿಕ ರಸ್ತೆ ಓಟ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಗೋಣಿಚೀಲ ಓಟ, ಸ್ಲೋ ಸೈಕಲ್ ರೇಸ್, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ , ರಂಗೋಲಿ ಸ್ಪರ್ಧೆ ಹೀಗೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.
