ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಬೇಂಗತ್ತೋಡಿ ನಿವಾಸಿ ಚಂದಪ್ಪ ನಾಯ್ಕ ಎಂಬವರ ಹಟ್ಟಿಯಿಂಡ ಗುರುವಾರ ರಾತ್ರಿ ಕಳುವಾಗಿದ್ದ ಜೋಡಿ ಕೋಣವು ಶನಿವಾರ ಬೆಳಿಗ್ಗೆ ಮನೆ ಸಮೀಪದ ಗುಡ್ಡದಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಪ್ರಗತಿಪರ ಕೃಷಿಕರಾಗಿರುವ ಚಂದಪ್ಪ ನಾಯ್ಕರು ಗದ್ದೆ ಉಳುಮೆಗಾಗಿ ಈಚೆಗಷ್ಟೇ ಜೋಡಿ ಕೋಣ ಖರೀದಿಸಿದ್ದು, ಕಳೆದ ಗುರುವಾರ ರಾತ್ರಿ ಹಟ್ಟಿಯಿಂದಲೇ ಕೋಣಗಳೆರಡು ಕಣ್ಮರೆಯಾಗಿತ್ತು. ಇದಕ್ಕಾಗಿ ಅವರು ಜೋಡಿ ಕೋಣ ಕಳುವಾಗಿದೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರಿಕೊಂಡಿದ್ದರು. ಇದರಿಂದಾಗಿ ಸ್ಥಳೀಯರು ಮನೆ ಸಮೀಪದ ಗುಡ್ಡೆಯೊಂದರಲ್ಲಿ ಹುಡುಕಾಟ ನಡೆಸಿದಾಗ ಶನಿವಾರ ಬೆಳಿಗ್ಗೆ ಮರವೊಂದಕ್ಕೆ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಇಲ್ಲಿನ ದನಗಳ್ಳರು ಹಟ್ಟಿಯಿಂದ ಕೋಣ ಕದ್ದು ಬಳಿಕ ಯಾರಿಗೂ ಕಾಣದಂತೆ ಮರಕ್ಕೆ ಕಟ್ಟಿ ಹಾಕಿ ಮುಂಜಾನೆ ವಾಹನದಲ್ಲಿ ಕೊಂಡೊಯ್ಯುವ ಉದ್ದೇಶ ವಿಫಲವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ
