ಮೂಡುಬಿದಿರೆ: ಆರ್ಥಿಕ ಸಂಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುವ ಮೂಲಕ ಮಾನವಧರ್ಮ ಸಕಾರಗೊಳ್ಳುತ್ತದೆ. ಮಾನವೀಯ ಮೌಲ್ಯ, ಸೇವಾಗುಣ ಸನಾತನ ಹಿಂದೂ ಧರ್ಮದಲ್ಲಿದೆ. ಸಂಘಟನೆಗಳು ಬಡವತನವನ್ನು ತೊಲಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಬೇಕು ಎಂದು ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮೂಡುಬಿದಿರೆ, ಯುವಶಕ್ತಿ ಯುವಕ ಮಂಡಲ ಬೊಗ್ರುಗುಡ್ಡೆ ಹಾಗೂ ಸಾರ್ವಜನಿಕ ಶ್ರೀಸತ್ಯನಾರಯಣ ಪೂಜಾ ಸಮಿತಿ ಬೊಗ್ರುಗುಡ್ಡೆ ಇದರ ವತಿಯಿಂದ ಹೊಸಬೆಟ್ಟು ಗ್ರಾ.ಪಂ ವ್ಯಾಪ್ತಿಯ ಬಡ ಮಹಿಳೆ ಬಿಟ್ಟುವಿಗೆ ನಿರ್ಮಿಸಿದ ಮನೆ ಹಸ್ತಾಂತರ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಆಶೀರ್ವಚನ ನೀಡಿದರು. ಸೇವೆಯು ಪ್ರಚಾರಕ್ಕೆ ಸೀಮಿತವಾಗದೆ, ಪ್ರೇರಣೆಯನ್ನು ನೀಡಬೇಕು. ಇನ್ನೊಬ್ಬರಿಗೆ ಉಪಕಾರ ಮಾಡಿದರೆ ಭಗವಂತನ ಬೆಂಬಲವೂ ಸಿಗುತ್ತದೆ ಎಂದರು.
ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟಿಕೊಡುವಂತಹ ಕೆಲಸ ಉತ್ಕೃಷ್ಟವಾದದ್ದು. ಇಂತಹ ಸೇವಾ ಮನೋಭಾವನೆಯೂ ಇತರರಿಗೆ ಸ್ಪೂರ್ತಿ ನೀಡಲಿ. ಸಾತ್ವಿಕ ಚಿಂತನೆಯನ್ನು ಪ್ರತಿಯೊಬ್ಬರಲ್ಲಿ ಮೂಡಿಸುವುದು ಮುಖ್ಯವಾಗುತ್ತದೆ ಎಂದರು.
ಆರ್ ಎಸ್ ಎಸ್ ದಕ್ಷಿಣ ಕ್ಷೇತ್ರ ಕಾರ್ಯಕಾರಣಿ ಪ್ರಮುಖ್ ಕಲ್ಲಡ್ಕ ಡಾ. ಪ್ರಭಾಕರ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ,ಮಾನವೀಯತೆ ಗುಣಗಳಿಂದಾಗಿ ಹಿಂದೂ ಧರ್ಮ ಜೀವಂತ. ಯಾವುದೋ ಜಾತಿಯ ಹೆಸರಿನಲ್ಲಿ ಸಮಾಜವನ್ನು ನಡೆಯುವ ಕೆಲಸವು ನಿರ್ವಿಘ್ನವಾಗಿ ನಡೆಯುತ್ತಿದೆ. ಅದನ್ನು ತಡೆಯುವ ಶಕ್ತಿ ಹಿಂದೂ ಧರ್ಮಕ್ಕಿದೆ ಎಂದರು.
ಸ್ಥಳೀಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಬಜರಂಗದಳ ಪ್ರಾಂತೀಯ ಸಂಚಾಲಕ ಶರಣ್ ಪಂಪ್ವೆಲ್, ಜಿಲ್ಲಾ ಸಹಸಂಚಾಲಕ ಪುನೀತ್ ಬಿಜೆಪಿ ಮೂಡುಬಿದರೆ ಮಂಡಲ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ವಿಹಿಂಪ ಮೂಡುಬಿದರೆ ಕಾರ್ಯಧ್ಯಕ್ಷ ಶ್ಯಾಮ್ ಹೆಗ್ಡೆ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

