ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆ ಮತ್ತಿತರ ಸಂವಹನ ಮಾಧ್ಯಮವು ಸಮಾಜದಲ್ಲಿ ಸುದ್ದಿ ಮತ್ತು ಮಾಹಿತಿ ನೀಡುವುದರ ಜೊತೆಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವಲ್ಲಿ ಜನಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದೆ ಎಂದು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಹೇಳಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಪತ್ರಕರ್ತರ ಸಂಘ (ರಿ.) ಇದರ ವತಿಯಿಂದ ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ‘ಪತ್ರಿಕಾ ದಿನಾಚರಣೆ’ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ‘ಪತ್ರಿಕೋದ್ಯಮ ಅರಿವು ಕಾರ್ಯಾಗಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1btl-carmel
ಸಂಘದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕಾ ಮಾಧ್ಯಮ ಬಗ್ಗೆ ಮಕ್ಕಳಿಗೆ ಸಮರ್ಪಕ ಮಾಹಿತಿ ನೀಡಿದಾಗ ಅವರಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಯುತ್ತದೆ ಎಂದರು.
ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಬೆಳೆಯುತ್ತಿದ್ದಂತೆಯೇ ಜನರಲ್ಲಿ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು. ದೃಶ್ಯ ಮಾಧ್ಯಮಗಳ ನಡುವಿನ ಸ್ಪರ್ಧೆಯೊಂದಿಗೆ ಪತ್ರಿಕೆಗಳು ಕೂಡಾ ಹೆಚ್ಚಳಗೊಂಡು ಓದುಗರ ಸಂಖ್ಯೆಯೂ ವೃದ್ಧಿಯಾಗುವ ಮೂಲಕ ಪತ್ರಿಕೆಯು ‘ಜನಸ್ನೇಹಿ’ಯಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಉಜ್ವಲ ಎ.ಸಿ. ಇವರು ಶುಭ ಹಾರೈಸಿದರು. ಉಪನ್ಯಾಸಕ ಸುರೇಶ ನಂದೊಟ್ಟು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ  ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಉಪನ್ಯಾಸಕ ರೋಶನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *