ತಿರುವನಂತಪುರ: ದೇಶಾದ್ಯಂತ ಭಾರೀ ಸುದ್ದಿಮಾಡಿದ್ದ 1996ರಲ್ಲಿ ಕೇರಳದ ಸೂರ್ಯನೆಲ್ಲಿ ಎಂಬಲ್ಲಿ ನಡೆದ 16 ವರ್ಷದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಧರ್ಮರಾಜನ್`ಗೆ ಕೇರಳ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದ ಆರೋಪಿಗಳಿಗೆ 4-13 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಸಂತ್ರಸ್ತೆಯ ಹೇಳಿಕೆಯನ್ನ ಪರಿಗಣಿಸಿ ತೀರ್ಪು ನೀಡಿರುವುದಾಗಿ ಕೋರ್ಟ್ ಹೇಳಿದೆ.
1996ರಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿ ಎಂಬಲ್ಲಿ 16 ವರ್ಷದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಯುವತಿಯನ್ನ ವಿವಿಧೆಡೆಗೆ ಸ್ಥಳಾಂತರಿಸಿ ಒಬ್ಬರಾದ ಮೇಲೆ ಒಬ್ಬರಂತೆ 40 ದಿನಗಳ ಕಾಲ ಯುವತಿಯನ್ನ ಕೂಡಿ ಹಾಕಿ ಸುಮಾರು 41 ಜನರು 68 ಬಾರಿ ಅತ್ಯಾಚಾರ ನಡೆಸಿದ್ದರು. ಪ್ರಕರಣದಲ್ಲಿ ರಾಜ್ಯಸಭೆಯ ಉಪಾಧ್ಯಕ್ಷ ಪಿ.ಜೆ. ಕುರಿಯನ್ ಹೆಸರೂ ಕೇಳಿಬಂದ ಹಿನ್ನೆಲೆಯಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಪಿ.ಜೆ. ಕುರಿಯನ್ ಸಹ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿಯೇ ಕೋರ್ಟ್`ಗೆ ಹೇಳಿಕೆ ನೀಡಿದ್ದಳು. ಆದರೆ, ಯುವತಿಯ ಆರೋಪವನ್ನು ಕೋರ್ಟ್ ತಳ್ಳಿಹಾಕಿತ್ತು. 2005ರಲ್ಲಿ ಪ್ರಮುಖ ಆರೋಪಿ ಧರ್ಮರಾಜನ್ ಒಬ್ಬನನ್ನು ಬಿಟ್ಟು ಉಳಿದ 35 ಮಂದಿಯನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಖುಲಾಸೆಯಾಗಿದ್ದವರ ಪೈಕಿ 24 ಆರೋಪಿಗಳು ತಪ್ಪಿತಸ್ಥರು: ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಎಂದರೆ 9 ವರ್ಷಗಳ ಹಿಂದೆ ಖುಲಾಸೆಗೊಂಡಿದ್ದ 24 ಆರೋಪಿಗಳನ್ನ ತಪ್ಪಿತಸ್ಥರೆಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. 9 ವರ್ಷಗಳ ಹಿಂದೆ ಹೈಕೋರ್ಟ್`ನ ಮತ್ತೊಂದು ನ್ಯಾಯಪೀಠ 24 ಮಂದಿಯನ್ನು ಖುಲಾಸೆಗೊಳಿಸಿತ್ತು. 24 ಮಂದಿಯನ್ನ ಒಟ್ಟೊಟ್ಟಿಗೆ ಖೂಲಾಸೆಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರುತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಮರುತನಿಖೆ ನಡೆದು 24 ಮಂದಿಯೂ ತಪ್ಪಿತಸ್ಥರೆಂದು ಸಾಬೀತಾಗಿದೆ.

