ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್ ಸರ್ವಿಸ್ ರಸ್ತೆಯ ನಾದುರಸ್ತಿಯ ಬಗ್ಗೆ ಜನತೆಯ ಆಕ್ರೋಶ ಮುಗಿಲು ಮುಟ್ಟಿದ್ದು, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಂಗಳವಾರ ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿವೆ.
ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಂ.1 ಎನ್ನಿಸಿಕೊಂಡಿರುವ ಸಂಸದರು ಬಿ.ಸಿ.ರೋಡಿನ ಜನರ ಕಷ್ಟವನ್ನು ಅರ್ಥಮಾಡಿಕೊಂಡಿಲ್ಲ, ಉಸ್ತುವಾರಿ ಸಚಿವರ ಊರಲ್ಲೇ ಜನರಿಗೆ ನಿತ್ಯ ಸಂಕಷ್ಟ ತಪ್ಪಿಲ್ಲ ಎಂದು ಆರೋಪಿಸಿದರು. ಸಾರ್ವಜನಿಕ ಸಮಸ್ಯೆಯ ಬಗೆಹರಿಕೆಗೆ ಎಲ್ಲಾ ಸಾರ್ವಜನಿಕರು ಜಾತಿ-ಮತ, ಪಕ್ಷ ಬೇಧ ಮರೆತು ಒಟ್ಟಾಗಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದರು.
30btl-protest

manavi
ಬ್ಯಾರಿ ಫೌಂಡೇಷನ್ ನ ಬಂಟ್ವಾಳ ತಾಲೂಕು ಅಧ್ಯಕ್ಷ ಪಿ.ಎ.ರಹೀಂ ಮಾತನಾಡಿ, ಸಮಸ್ಯೆಗಳ ಸರಮಾಲೆ ನಮ್ಮ ಕಣ್ಣ ಮುಂದೆ ಇದ್ದರೂ, ಸಾರ್ವಜನಿಕರು ಜಾಗೃತವಾಗದಿರುವುದೇ, ಜನಪ್ರನಿಧಿಗಳ ಮತ್ತು ಅಧಿಕಾರಿಗಳ ಉದಾಸೀನತೆಗೆ ಕಾರಣವಾಗಿದೆ, ಮುಂದಿನ ದಿನಗಳಲ್ಲಿ ಜನತೆ ಜಾಗೃತರಾಗಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿದ್ದೆ ಬಿಡಿಸುವ ಕೆಲಸ ಆಗಬೇಕಿದೆ ಎಂದರು.
ಪುರಸಭಾ ಸದಸ್ಯ ಸದಾಶಿವ ಬಂಗೇರ, ಪ್ರಮುಖರಾದ ಹಾರೂನ್ ರಶೀದ್, ಕೆ.ಹೆಚ್.ಅಬೂಬಕರ್, ರಿಕ್ಷಾ ಚಾಲಕ-ಮಾಲಕ ಸಂಘಟನೆಯ ಪದಾಧಿಕಾರಿಗಳು ಮಾತನಾಡಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುಬೇಕೆಂದು ಪಟ್ಟು ಹಿಡಿದ ಪ್ರತಿಭಟನಾ ಕಾರರು, ಸುಮಾರು 1 ತಾಸುಗಳ ಕಾಲ ರಸ್ತೆ ತಡೆ ನಡೆಸಿದರು. ಮನವಿ ಸ್ವೀಕರಿಸಲು ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ರವರು ಸ್ಥಳಕ್ಕೆ ಬಂದಾಗ, ಇದಕ್ಕೆ ಆಕ್ಷೇಪಿಸಿದ ಪ್ರತಿಭಟನಾ ಕಾರರು ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಪಂದಿಸಿದ ಸಹಾಯಕ ಆಯುಕ್ತರು, 23 ಕೋಟಿ ರೂ ವೆಚ್ಚದಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ನಡೆಯಬೇಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ತುರ್ತು ನಿರ್ವಹಣೆಯ ಉದ್ದೇಶದಿಂದ ಹೊಂಡ ಮುಚ್ಚುವ ಕಾಮಗಾರಿ ನಡೆಸಲಾಗಿದೆ. ಎಲ್ಲಾ ಬೇಡಿಕೆಗಳನ್ನು ಪ್ರಾಧಿಕಾರದ ಅಧಿಕಾರಿಗಳಿಗೆ ತಲುಪಿಸಿ ಪರಿಹಾರಕ್ಕೆ ಸೂಚನೆ ನೀಡಲಾಗುವುದು, ಒತ್ತಡ ಹೇರಲಾಗುವುದು ಎಂದವರು ತಿಳಿಸಿದರು..
ಬಿ.ಸಿ.ರೋಡಿನ ಎಲ್ಲಾ ಸರ್ವಿಸ್ ರಸ್ತೆಗಳ ದುರಸ್ತಿ, ಪಾದಾಚಾರಿಗಳ ಕಾಲು ದಾರಿ ನಿರ್ಮಾಣ, ಫ್ಲೈಒವರ್‍ನಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ, ಸರ್ವಿಸ್ ರಸ್ತೆಯಲ್ಲಿ ಚರಂಡಿ ನಿರ್ಮಾಣ, ಅಟೋರಿಕ್ಷಾ, ಟೂರಿಸ್ಟ್, ಖಾಸಗಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಸ್ಥಳ ಗುರುತಿಸುವುದು. ಸರಕಾರಿ ಮತ್ತು ಸರ್ವಿಸ್ ಬಸ್ ಸರ್ವಿಸ್ ಬಸ್ ನಿಲ್ದಾಣಗಳನ್ನು ತ್ವರಿತ ನಿರ್ಮಿಸುವುದು. ಬಂಟ್ವಾಳ ತಾಲೂಕು ಕೇಂದ್ರ ಸರಕಾರಿ ಆಸ್ಪತ್ರೆಯ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವುದು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾಡುವುದು. ಕಳ್ಳಿಗೆ ಕೈಕಂಬದಲ್ಲಿ ಪಾದಾಚಾರಿಗಳಿಗೆ ಮೇಲ್ಸೆತುವೆ ನಿರ್ಮಾಣ, ಜನ ನಿಬಿಡ ಪ್ರದೇಶದಲ್ಲಿ ಸಂಚಾರಿ ಪೊಲೀಸರ ನಿಯೋಜಿಸಬೇಕು ಮೊದಲಾದ ಬೇಡಿಕೆಗಳುಳ್ಳ ಮನವಿಯನ್ನು ಸಹಾಯಕ ಆಯುಕ್ತರಿಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ದ.ಕ.ಜಿಲ್ಲಾ ಟೂರಿಸ್ಟ್ ಕಾರು ಹಾಗೂ ವ್ಯಾನ್ ಚಾಲಕ-ಮಾಲಕರ ಸಂಘದ ಸ್ಥಾಪಕಾಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ, ಬಂಟ್ವಾಳ ತಾಲೂಕು ರಿಕ್ಷಾ ಡ್ರೈವರ್ಸ್ ಎಸೋಸಿಯೇಶನ್‍ನ ಉಸ್ಮಾನ್, ನ್ಯಾಯಪರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಕಾಯೆರ್‍ಮಾರ್, ಬಂಟ್ವಾಳ ತಾಲೂಕು ಅಟೋರಿಕ್ಷಾ ಚಾಲಕರ ಸಂಘ-ಬಿಎಂಎಸ್, ಬಂಟ್ವಾಳ ತಾಲೂಕು ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್, ಸಂಚಾರಿ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು.
ಬಂಟ್ವಾಳ ತಾಲೂಕು ರಿಕ್ಷಾ ಡ್ರೈವರ್ ಎಸೋಸಿಯೇಶನ್,ಬಂಟ್ವಾಳ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ (ಬಿಎಂಎಸ್), ಬಂಟ್ವಾಳ ತಾಲೂಕು ಸಣ್ಣ ಹಾಗೂ ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘ, ದ.ಕ.ಜಿಲ್ಲಾ ಗ್ಯಾರೇಜ್ ಮಾಲಕ ಸಂಘ ಬಂಟ್ವಾಳ ತಾಲೂಕು, ದ.ಕ.ಜಿಲ್ಲಾ ಟೂರಿಸ್ಟ್ ಕಾರು ಹಾಗು ವ್ಯಾನ್ ಚಾಲಕ -ಮಾಲಕರ ಸಂಘ (ರಿ) ಬಿ.ಸಿ.ರೋಡ್, ಬ್ಯಾರಿ ಪೌಂಡೇಷನ್ ಬಂಟ್ವಾಳ ತಾಲೂಕು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

By Suddi9

Leave a Reply

Your email address will not be published. Required fields are marked *