ಬಂಟ್ವಾಳದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಪಿ. ಆನಂದ ನಾಯ್ಕ ಇವರು ಕರ್ನಾಟಕ ಸರಕಾರದಿಂದ ನೀಡಲ್ಪಡುವ 2015-16 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪಡೆದು ತಾಲೂಕಿಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಾಗನವಳಚ್ಚಿಲ್ ಎಂಬಲ್ಲಿಯ ಇವರು ಮೃತ ಬಾಬು ನಾಯ್ಕ ಚಂದ್ರಾವತಿ ದಂಪತಿಗಳ ಸುಪುತ್ರನಾಗಿದ್ದು 1997 ರಲ್ಲಿ ಅಗ್ನಿ ಶಾಮಕ ಸಿಬ್ಬಂದಿಯಾಗಿ ಉಡುಪಿ ಜಿಲ್ಲೆಯಲ್ಲಿ ಸೇವೆಯನ್ನು ಪ್ರಾರಂಭಿಸಿದ್ದರು. ಆ ಬಳಿಕ ಬೆಳ್ತಂಗಡಿ ಠಾಣೆಗೆ ವರ್ಗಾವಣೆಗೊಂಡು ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ.ಬೆಳ್ತಂಗಡಿಯಲ್ಲಿ ಸೇವೆಯಲ್ಲಿರುವಾಗ ಬೈ ಹುಲ್ಲು ಸಾಗಿಸುವ ಲಾರಿಯೊಂದಕ್ಕೆ ವಿದ್ಯುತ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿ ಬಹಳಷ್ಟು ಸಾಹಸ ಪಟ್ಟು ಲಾರಿಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದರಲ್ಲಿ ತಾನು ಬೆಂಕಿಯಲ್ಲಿ ಬೆಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆ ಬಳಿಕ ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದ ಸಂದರ್ಭದಲ್ಲಿ ತನ್ನ ಜೀವದ ಹಂಗು ತೊರೆದು ಅನೇಕ ಗಾಯಾಳು ಮೃತ ದೇಹಗಳನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದರು. ಇವರ ಈ ಎಲ್ಲಾ ಸಾಹಸ ಸೇವೆಗಳನ್ನು ಗುರುತಿಸಿದ ಜಿಲ್ಲೆಯ ಹಲವಾರು ಸಂಘ ಸಂಸ್ಥಗಳು ಸನ್ಮಾನಿ ಗೌರವಿಸಿವೆ. ಬಂಟ್ವಾಳದಲ್ಲಿ ನೂತನ ಠಾಣೆಯು ಪ್ರಾರಂಭವಾದಂದಿನಿಂದ ವರ್ಗಾ ವಣೆಯಾಗಿ ಆನಂದ ನಾಯ್ಕರು ಇಲ್ಲೂ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ.

ನೆರೆ, ಬೆಂಕಿ ಅಪಘಾತ, ಅವಗಡಗಳ ಸಂದರ್ಭಗಳಲ್ಲಿ ತಮ್ಮ ಜೀವನವನ್ನು ಒತ್ತೆ ಇಟ್ಟು ಬಹಳಷ್ಟು ಸಾಹಸ ಕಾರ್ಯಗಳ ಮೂಲಕ ನಾಡಿನ ಆಸ್ತಿ ಪಾಸ್ತಿ ಪ್ರಾಣಗಳನ್ನು ಉಳಿಸಲು ಪ್ರಯತ್ನಿಸುತ್ತಾ ಎಲೆಮರೆಯ ಕಾಯಿಯಂತಿರುವ ಅಗ್ನಿ ಶಾಮಕ ಸಿಬ್ಬಂದಿಗಳನ್ನು ಸರಕಾರ, ಸಂಘಟನೆಗಳು ಗುರುತಿಸಿ ಗೌರವಿಸಿದಲ್ಲಿ ಅವರು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಇನ್ನಷ್ಟು ತೊಡಗಿಸಿಕೊಳ್ಳಲು ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ.

ಇದೀಗ ಇಂತಹ ಹಲವಾರು ಸಾಹಸ ಕಾರ್ಯಗಳ ಮೂಲಕ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಆನಂದ ನಾಯ್ಕ ಇವರು ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆಯುವ ಮೂಲಕ ನಮ್ಮ ಜಿಲ್ಲೆಯ ಹೆಮ್ಮೆಯ ಅಗ್ನಿ ಶಾಮಕ ಸಿಬ್ಬಂದಿಯಾಗಿ ಹೊರಹೊಮ್ಮಿದ್ದಾರೆ.

By Suddi9

Leave a Reply

Your email address will not be published. Required fields are marked *