ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಎ. ವಾಸುದೇವ ಭಂಡಾರಿ ಹಾಗೂ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿಗೊಂಡು ವರ್ಗಾವಣೆ ಗೊಂಡ ಸಿಬ್ಬಂದಿ ಎ.ಕೆ. ಕುಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಬುಧವಾರ ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಭಾಂಗಣದಲ್ಲಿ ನಡೆಯಿತು.

ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಅವರು ಇರ್ವರನ್ನೂ ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಹಾಗೂ ನಿವೃತ್ತಿ ಸಾಮಾನ್ಯ. ಸೇವಾ ಅವಧಿಯಲ್ಲಿನ ಸಿಹಿಕಹಿ ಅನುಭವಗಳು ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಏನೇ ಕಹಿ ಅನುಭವವಾಗಿದ್ದರೂ ಅದನ್ನು ಮರೆತು ನಿವೃತ್ತ ಜೀವನವನ್ನು ನೆಮ್ಮದಿ ಹಾಗೂ ಆರೋಗ್ಯದಿಂದ ಕಳೆಯುವ ಅವಕಾಶ ಒದಗಿ ಬರಲಿ ಎಂದು ಆಶಿಸಿದರು. ವರ್ಗಾವಣೆ ಗೊಂಡ ಕುಟ್ಟಿ ಅವರ ಬಗ್ಗೆಯೂ ಅಭಿಮಾನದ ಮಾತುಗಳನ್ನಾಡಿದರು.
ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಮಾತನಾಡಿ ಕಷ್ಟಗಳು ಜೀವನದಲ್ಲಿ ಸಹಜ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಜೀವನವನ್ನು ನಡೆಸಬೇಕು ಎಂದರು. ಇಬ್ಬರು ಅಧಿಕಾರಿಗಳು ಗ್ರಾಮಾಂತರ ಠಾಣೆಯಲ್ಲಿ ನೀಡಿದ ಪ್ರಾಮಾಣಿಕ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಮಾತನಾಡಿದರು. ನಗರ ಠಾಣಾ ಎಸೈ ನಂದಕುಮಾರ್, ಪ್ರೊಬೇಷನರಿ ಎಸೈ ಮಂಜುನಾಥ ವೇದಿಕೆಯಲಿದ್ದರು. ಸಿಬ್ಬಂದಿ ಲಕ್ಷ್ಮಣ್ ಸಹಕರಿಸಿದರು. ಸಿಬ್ಬಂದಿ ರಘುರಾಮ ಹೆಗ್ಡೆ ಸ್ವಾಗತಿಸಿ ವಂದಿಸಿದರು. ಮಂಜುವಿಟ್ಲ ಕಾರ್ಯಕ್ರಮ ನಿರೂಪಿಸಿದರು.
