ಮೂಡುಬಿದಿರೆ : ಮೂಡುಬಿದಿರೆಯಲ್ಲಿರುವ ಕ್ರೀಡಾಪಟುಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿನ ಜ್ಯೋತಿ ನಗರದಲ್ಲಿರುವ ಗಾಂಧೀ ಪಾರ್ಕಿನಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಸ್ಕೇಟಿಂಗ್ ರ್ಯಾಂಪ್ ಮಾಡಲಾಗುವುದು, ಸ್ವರಾಜ್ ಮೈದಾನದಲ್ಲಿರುವ ವ್ಯಾಯಾಮ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಹಾಗೂ ಸಿಂಥೆಟಿಕ್ ಟ್ರ್ಯಾಕ್‍ನ ಒಳಪದರಕ್ಕೆ ಅಲ್ಯೂಮಿನಿಯಂ ಪ್ರೇಮ್ ಅಳವಡಿಸಲು ಈಗಾಗಲೇ ರೂ 18 ಲಕ್ಷವನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡುಬಿದಿರೆಯ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ 12 ದಿನಗಳ ಕಾಲ ತರಬೇತಿ ಮುಗಿಸಿ ಜು.3ರಿಂದ ದ.ಕೊರಿಯಾದ ವಾಂಗ್ಜುನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿವಿಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಭಾರತೀಯ 7 ಕ್ರೀಡಾಪಟುಗಳನ್ನು ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಸನ್ಮಾನಿಸಿ ಮಾತನಾಡಿದರು. ಈಗಾಗಲೇ ಈಜುಕೊಳ ನಿರ್ಮಾಣ ಹಂತದಲ್ಲಿದ್ದು ತರಬೇತಿಯನ್ನು ನೀಡಲು ರಾಷ್ಟ್ರಮಟ್ಟದ ತರಬೇತುದಾರರನ್ನು ನೇಮಿಸಲಾಗುವುದು, ಕ್ರೀಡಾಪಟುಗಳ ರಕ್ಷಣೆಗಾಗಿ ವಿಮೆ ಸಹಿತ ಎಲ್ಲಾ ಯೋಜನೆಗಳಿಗೆ ರಾಜ್ಯ ಸರಕಾರ ಸ್ಪಂದಿಸುವ ಮೂಲಕ ಡಾ. ಆಳ್ವರ ಕನಸುಗಳಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೀಡಾ ಪ್ರೋತ್ಸಾಹಕ ಮೂಲ್ಕಿಯ ರೆ.ಫಾ ಗೋಮ್ಸ್ ಮಾತನಾಡಿ ಇಂದು ನಮ್ಮ ದೇಶದಲ್ಲಿ ಕ್ರಿಕೆಟ್‍ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಆದರೆ ಇತರ ದೇಶಗಳಲ್ಲಿ ಫುಟ್‍ಬಾಲ್ ಸಹಿತ ಇತರ ಅಥ್ಲೆಟಿಕ್ಸ್‍ಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಮತ್ತು ಮಾಧ್ಯಮಗಳು ಕ್ರೀಡಾಕೂಟ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಾಶಸ್ಯ ನೀಡುವ ಅವಶ್ಯಕತೆ ಇದೆ ಎಂದ ಅವರು ಕ್ರೀಡಾಪಟುಗಳಿಗಾಗಿ ಕ್ರೀಡಾ ಕ್ಲಿನಿಕ್ ಮತ್ತು ಕ್ರೀಡಾ ಕೌನ್ಸಿಲಿಂಗ್ ಕೇಂದ್ರಗಳನ್ನು ತೆರೆಯಬೇಕಾಗಿದೆ ಎಂದರು.
ಸನ್ಮಾನ : ತೇಜೆಂದರ್‍ಪಾಲ್ ಸಿಂಗ್( ಶಾಟ್‍ಪುಟ್) , ಮಹಮ್ಮದ್ ಸಲಾವುದ್ದೀನ್( ಟ್ರಿಪಲ್ ಜಂಪ್), ಲಲಿತ್( 100ಮೀ), ಮಹೆಪ್ರೀತ್(100ಮೀ), ಭೂಮಿಕಾ ಥಾಕೋರ್( ಲಾಂಗ್‍ಜಂಪ್), ರೀತು ದಿನಾಕರ್( 5 ಸಾವಿರ ಮೀ) ಹಾಗೂ ಆಳ್ವಾಸ್ ನ ಪ್ರಿಯಾಂಕ ಕಲಗಿ ( 200 ಮೀ) ಇವರನ್ನು ಯಕ್ಷಗಾನದ ಕಿರೀಟ ಮತ್ತು ನಗದು ನೀಡಿ ಸನ್ಮಾನಿಸಲಾಯಿತು. ಡಾ.ಜಸ್ಬೀರ್ ಸಿಂಗ್ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಿಬಿರದಲ್ಲಿ ಕುರಿತು ತರಬೇತು ನೀಡುತ್ತಿದ್ದಾರೆ. ರಾಷ್ಟ್ರ ಮಟ್ಟದ ತರಬೇತುದಾರರಾದ ರಣಬೀರ್ ಸಿಂಗ್, ಜಸ್ಬೀರ್‍ಸಿಂಗ್, ಧರ್ಮೇಂದರ್ ಸಿಂಗ್, ಹಾಗೂ ಏಷ್ಯಾನ್ ಪದಕ ವಿಜೇತ ಮಾಜಿ ಕ್ರೀಡಾಪಟು, ಭಾರತೀಯ ರೈಲ್ವೇ ಕೋಚ್ ಮಹಮ್ಮದ್ ನಿಜಾಮ್ ಅವರನ್ನು ಗೌರವಿಸಲಾಯಿತು.
mbd_june23_8
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ವೈಜ್ಞಾನಿಕ ತರಬೇತಿ ಕೇಂದ್ರ ಮಾಡಬೇಕೆಂಬ ಇಚ್ಛೆ ಇತ್ತು. ಇದೀಗ ರೂ 10ಲಕ್ಷ ವೆಚ್ಚದಲ್ಲಿ ಸ್ಯಾಂಡ್ ರನ್ನಿಂಗ್ ಟ್ರಾಕ್, ಬೀಚ್ ವಾಲಿಬಾಲ್ ಕೋರ್ಟ್ ನಿರ್ಮಾಣಗೊಳ್ಳುತ್ತಿದೆ. ಉದ್ದ ಜಿಗಿತಕ್ಕಾಗಿ ಟ್ರಾಪ್ ಬಯೋ ಮಾಟ್ರಿಕ್ಸ್ ಬಾಕ್ಸ್ ಮಾಡಲಾಗುವುದು ಅಲ್ಲದೆ ಕ್ರೀಡಾಪಟುಗಳಿಗಳಲ್ಲಿ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ.
ಎಂದರು. ಮುಖ್ಯ ಕೋಚ್ ಜಸ್ಬೀರ್ ಸಿಂಗ್ ಮತ್ತು ಭಾರತೀಯ ರೈಲ್ವೇಸ್‍ನ ಕೋಚ್ ಮಹಮ್ಮದ್ ನಿಜಾಮ್ ಅನಿಸಿಕೆಗಳನ್ನು ಹಂಚಿಕೊಂಡರು.
ಅಂತಾರಾಷ್ಟ್ರೀಯ ಕ್ರೀಡಾಪಟು ಸುನೀಲ್ ಶೆಟ್ಟಿ, ಓಲಂಪಿಕ್ ಕ್ರೀಡಾಪಟು ಮಯೂಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಯುವ ಸಬಲೀಕರಣ ಇಲಾಖೆಯ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ದ.ಕೊರಿಯಾದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಭಾಗವಹಿಸಲು ತೆರಳುತ್ತಿರುವ ಕ್ರೀಡಾಪಟುಗಳಿಗೆ ಅಲ್ಲಿನ 500 ಡಾಲರ್‍ಗೆ ಸಮವಾಗಿರುವ 32 ಸಾವಿರದ ಪಾಕೆಟ್ ಮನಿಯನ್ನು ನೀಡಿದರು ಹಾಗೂ ಕ್ರೀಡಾಕೂಟದಲ್ಲಿ ಪದಕವನ್ನು ಪಡೆಯುವ ಕ್ರೀಡಾಪಟುಗಳಿಗೆ ಕ್ರಮವಾಗಿ 50,000, 30,000 ಮತ್ತು 20 ಸಾವಿರ ನಗದನ್ನು ನೀಡುವುದಾಗಿ ಡಾ.ಮೋಹನ ಆಳ್ವ ಘೋಷಿಸಿದರು.

By Suddi9

Leave a Reply

Your email address will not be published. Required fields are marked *