ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಕೈಕುಂಜೆ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್ ಮತ್ತಿತರ ಮೂರು ಅಂಗಡಿಗಳಲ್ಲಿ ಭಾನುವಾರ ತಡರಾತ್ರಿ ಸರಣಿ ಕಳವು ನಡೆದಿರುವ ಬಗ್ಗೆ ತಿಳಿದು ಬಂದಿದೆ.
ಇಲ್ಲಿನ ನಿವಾಸಿ ಆನಂದ ಕುಲಾಲ್ ಮತ್ತು ಗೋಪಾಲ ಎಂಬವರ ಕ್ಯಾಂಟೀನ್ ಒಳಗೆ ನುಗ್ಗಿದ ಕಳ್ಳರು ಅಲ್ಲೇ ಮದ್ಯ ಸೇವಿಸಿ ಬಾಟಲು ಎಸೆದಿರುವುದು ಪತ್ತೆಯಾಗಿದೆ. ಕ್ಯಾಂಟೀನ್ ಒಳಗೆ ಚಿಲ್ಲರೆ ನಾಣ್ಯ ಸಂಗ್ರಹಿಸಿಟ್ಟಿದ್ದ ದೇವರ ಕಾಣಿಕೆ ಡಬ್ಬ ಸಹಿತ ಸಿಗರೇಟು, ತಂಪು ಪಾನೀಯ ಮತ್ತಿತರ ಸ್ವತ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಕ್ಯಾಂಟೀನ್ಗೆ ಕುಡಿಯುವ ನೀರು ಪೂರೈಸುವ ಪೈಪ್ ಒಡೆದು ಹಾಕಿ ಫ್ಯಾನ್ ಮತ್ತಿತರ ವಿದ್ಯುತ್ ಪರಿಕರ ಹಾಗೂ ಅಡುಗೆ ಅನಿಲ ಸಿಲಿಂಡರ್ಗೆ ಹಾನಿ ಮಾಡಿರುವುದು ಕಂಡು ಬಂದಿದೆ.

ಈ ಕ್ಯಾಂಟೀನ್ ಪಕ್ಕದಲ್ಲೇ ಇರುವ ಬೈಕ್ ಮತ್ತಿತರ ವಾಹನ ದುರಸ್ತಿ ಸಾಮಾಗ್ರಿ ಮಾರಾಟ ಅಂಗಡಿಗೆ ನುಗ್ಗಿದ ಕಳ್ಳರು ಚಿಲ್ಲರೆ ನಾಣ್ಯ ಮತ್ತು ಕೆಲವೊಂದು ಬೆಲೆ ಬಾಳುವ ಸ್ವತ್ತುಗಳನ್ನು ಎಗರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಇಲ್ಲಿನ ಆದಂ ಕುಂಞಿ ಎಂಬವರ ಗೂಡಂಗಡಿಗೆ ನುಗ್ಗಿ ಚಿಲ್ಲರೆ ನಾಣ್ಯ ಹಾಗೂ ವಿವಿಧ ಬೆಲೆ ಬಾಳುವ ಸಾಮಾಗ್ರಿ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಆರೋಪ:
ಮಳೆ ನೆಪದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ಸಂಪರ್ಕ ಮತ್ತು ರಾತ್ರಿಪಾಳಿ ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ಬಿ.ಸಿ.ರೋಡ್ ಪರಿಸರದಲ್ಲಿ ಪ್ರತೀ ವರ್ಷ ಕಳವು ಪ್ರಕರಣ ಹೆಚ್ಚುತ್ತಿದ್ದರೂ ಈತನಕ ಕಳ್ಳರು ಮಾತ್ರ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಎಂದು ಇಲ್ಲಿನ ವರ್ತಕರು ಮತ್ತು ನಾಗರಿಕರು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *