ಮೂಡಬಿದರೆ: ಇದೇ ಬರುವ ಜು. 3ರಿಂದ 14ರವರೆಗೆ ಕೊರಿಯಾದ ವಾಂಗ್ಜುನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿರವ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ 11 ಮಂದಿ ಕ್ರೀಡಾಪಟುಗಳ ಪೈಕಿ 9 ಮಂದಿ ಕ್ರೀಡಾಳುಗಳೀಗ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ತರಬೇತಿ ನಿರತರಾಗಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ಜೂ.11ರಿಂದ 24ರವರೆಗೆ ನಡೆಯುತ್ತಿರುವ ತರಬೇತಿಯಲ್ಲಿ 4 ಮಂದಿ ಕೋಚ್ಗಳು ವ್ಯವಸ್ಥಿತ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ.
ರಾಷ್ಟ್ರೀಯ ಕ್ರೀಡಾ ತರಬೇತುದಾರಾದ ಡಾ.ಜಸ್ಬೀರ್ ಸಿಂಗ್ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಶಿಬಿರದಲ್ಲಿ ಕುರಿತು ತರಬೇತಿ ನೀಡುತ್ತಿದ್ದಾರೆ. ಜಂಪ್ ಕೋಚ್ ರಣಬೀರ್ ಸಿಂಗ್, ತ್ರೋ ಬಾಲ್ ಕೋಚ್ ಧರ್ಮಂದರ್ ಸಿಂಗ್ ಹಾಗೂ ಆಳ್ವಾಸ್ ಸಂಸ್ಥೆಯಿಂದ ವಿಶೇಷ ಆಹ್ವಾನಿತ ಕೋಚ್ ಆಗಿ ಏಷ್ಯಾನ್ ಪದಕ ವಿಜೇತ ಮಾಜಿ ಕ್ರೀಡಾಪಟು, ಭಾರತೀಯ ರೈಲ್ವೇ ಕೋಚ್ ಮಹಮ್ಮದ್ ನಿಜಾಮ್ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ಮಂಗಳೂರು ವಿ.ವಿಯಿಂದ ಪ್ರಿಯಾಂಕ:
ಮಂಗಳೂರು ವಿ.ವಿ.ಯ ಸ್ಥಾಪನೆಯ 38 ವರ್ಷ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿ.ವಿ.ಯನ್ನು ಪ್ರತಿನಿಧಿಸುತ್ತಿರುವ ಆಳ್ವಾಸ್ನ ಕ್ರೀಡಾಪಟು ಪ್ರಿಯಾಂಕ ಎಸ್.ಕಲಗಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳಾ ಕ್ರೀಡಾಪಟುವೂ ಹೌದು. ಮಂಗಳೂರು ವಿ.ವಿ 1 ಲಕ್ಷ ಹಾಗೂ ಆಳ್ವಾಸ್ ಸಂಸ್ಥೆಯು 90 ಸಾವಿರವನ್ನು ಪ್ರಿಯಾಂಕಳಿಗೆ ನೀಡಿದೆ. ಭರವಸೆಯ ಶಾಟ್ಪುಟ್ಪಟು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿಶೇಷ ಪ್ರೋತ್ಸಾಹಕ್ಕೆ ಪಡೆಯುತ್ತಿರುವ ಇಂದ್ರಜಿತ್ ಸಿಂಗ್ ಕೆಲವು ದಿನಗಳ ಶಿಬಿರದಲ್ಲಿ ಭಾಗವಹಿಸಿ ಕ್ರೀಡಾಕೂಟವೊಂದರಲ್ಲಿ ಭಾಗವಹಿಸುವುದಕ್ಕಾಗಿ ತೆರಳಿದ್ದಾರೆ.
ತೇಜೆಂದರ್ಪಾಲ್ ಸಿಂಗ್( ಶಾಟ್ಪುಟ್) ಮಹಮ್ಮದ್ ಸಲಾಲುದ್ದೀನ್( ಟ್ರಿಪಲ್ ಜಂಪ್), ಲಲಿತ್( 100ಮೀ), ಮಹೆಪ್ರೀತ್(100ಮೀ), ಭೂಮಿಕಾ ಥಾಕೋರ್( ಲಾಂಗ್ಜಂಪ್), ರೀತು ದಿನಾಕರ್( 5 ಸಾವಿರ ಮೀ) ತರಬೇತು ಪಡೆಯುತ್ತಿದ್ದಾರೆ. ಸ್ವರಾಜ್ಯ ಮೈದಾನಕ್ಕೆ ಭೇಟಿ ನೀಡಿ ಕ್ರೀಡಾಪಟುಗಳು ಹಾಗೂ ಕೋಚ್ಗಳ ಜೊತೆ ಸಂವಾದ ನಡೆಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರವು ಮೂಡುಬಿದರೆಗೆ ನೀಡಿದ ಅಮೂಲ್ಯ ಕೊಡುಗೆಯಾದ ಸಿಂಥೆಟಿಕ್ ಟ್ರ್ಯಾಕ್ ಅನ್ನು ಜತನದಿಂದ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.ಇದಕ್ಕೋಸ್ಕರ ಆಳ್ವಾಸ್ ಸಂಸ್ಥೆಯು ಶ್ರಮಿಸುತಿದ್ದು, ಮೈದಾನದ ನಿರ್ವಹಣೆಗೆ 4 ಜನ ಕಾಯಂ ಕೆಲಸಗಾರರನ್ನು ಆಳ್ವಾಸ್ ಸಂಸ್ಥೆಯಿಂದಲೇ ಒದಗಿಸಿದ್ದೇವೆ.
ಒಲಿಂಪಿಕ್ನಲ್ಲಿ ಭಾಗವಹಿಸುತ್ತಿರುವ ದೇಶದ ಕ್ರೀಡಾಪಟು ಮಾಯೂಕಾ( ಕೇರಳ), ಮುಂಬೈನ ಛತ್ರಪತಿ ಶಿವಾಜಿ ಮೈದಾನವನ್ನು ಆಯ್ಕೆ ಮಾಡದೇ ಸ್ವರಾಜ್ಯ ಮೈದಾನ ಟ್ರ್ಯಾಕ್ ಆಯ್ಕೆ ಮಾಡಿರುವುದು ಮೈದಾನದ ಗುಣಮಟ್ಟದ ಬಗ್ಗೆ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾತಜ್ಞರಿಗಿರುವ ಭರವಸೆಗೆ ಸಾಕ್ಷಿಯಾಗಿದೆ. ರಾಷ್ಟ್ರಮಟ್ಟದ ಕ್ರೀಡಾಕೂಟ, ತರಬೇತು ಶಿಬಿರದ ನೆಪದಲ್ಲಿ ಬರುವ ರಾಷ್ಟ್ರೀಯ ತರಬೇತುದಾರರು ಹಾಗೂ ಕ್ರೀಡಾಪಟುಗಳು ಸಲಹೆಯಂತೆ ದಾನವನ್ನು ವೈಜ್ಞಾನಿಕವಾಗಿ ರೂಪಿಸಲಾಗುವುದು ಎಂದರು. ಶಿಬಿರದ ಸಂಯೋಜಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.



