ಬಂಟ್ವಾಳ: ಸಮಾಜದಲ್ಲಿ ಗ್ರಾಮೀಣ ಅಥವಾ ನಗರ ರಸ್ತೆ ಹದಗೆಟ್ಟಿದೆ ಎಂದು ಆಕ್ರೋಶಗೊಂಡು ಸ್ಥಳೀಯರು ಒಟ್ಟು ಸೇರಿ ಪ್ರತಿಭಟನೆ ನಡೆಸುವುದು ಅಥವಾ ಶ್ರಮದಾನ ಮೂಲಕ ರಸ್ತೆ ದುರಸ್ತಿಪಡಿಸುವುದು ಸಹಜ. ಆದರೆ ಬೃಹತ್ ಗಾತ್ರದ ಲಾರಿಗಳಲ್ಲಿ ನಿರಂತರವಾಗಿ ಅಕ್ರಮ ಮತ್ತು ಸಕ್ರಮ ಮರಳು ಸಾಗಾಟವಾಗುತ್ತದೆ ಎಂದು ಆರೋಪಿಸಿ ಡಾಂಬರೀಕರಣಗೊಂಡ ಸುಂದರ ರಸ್ತೆಯನ್ನೇ ಅಗೆದು ಹಾಕಿದ ಕಿಡಿಗೇಡಿ ಕೃತ್ಯವೊಂದು ಸರಪಾಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಇಲ್ಲಿನ ಸರಪಾಡಿ-ಕೊಟ್ಟುಂಜ-ಗಂಡಿ ರಸ್ತೆಯಲ್ಲಿ ಲಾರಿ ಮತ್ತು ಟಿಪ್ಪರ್ ಮೂಲಕ ವ್ಯಾಪಕವಾಗಿ ಮರಳು ಸಾಗಾಟವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನವಾಗಿ ಅದನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಸರಪಾಡಿ-ಅಜಿಲಮೊಗರು ಸಂಪರ್ಕಿಸುವ ಗಂಡಿ-ಕೊಟ್ಟುಂಜ ರಸ್ತೆಯು ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಡಾಂಬರೀಕರಣಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದ್ದರು. ಮಾತ್ರವಲ್ಲದೆ ಇದೇ ಮುಂದುವರಿಕಾ ರಸ್ತೆಗೆ ತೇಪೆ ಡಾಂಬರೀಕರಣವೂ ನಡೆದಿದ್ದು, ಈ ರಸ್ತೆಯಲ್ಲಿ ಮರಳು ಸಾಗಾಟವಾಗುತ್ತಿರುವುದನ್ನು ಕಂಡ ಕೆಲವೊಂದು ಕಿಡಿಗೇಡಿಗಳು ರಸ್ತೆಯ ಒಂದು ಬಂದಿ ಅಗೆದು ಹಾಕಿದ್ದಾರೆ.
ಇದೀಗ ಅಗೆದು ಹಾಕಿದ ರಸ್ತೆಯಲ್ಲಿ ಮಳೆಯಿಂದಾಗಿ ಜೆಲ್ಲಿ, ಮರಳು ಕೊರೆದು ಹೋಗಿ ದಿನೇ ದಿನೇ ಹೊಂಡ ವಿಸ್ತಾರಗೊಂಡು ಘನ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿನ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ಉರುಳಿ ಬೀಳುವ ಭೀತಿ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಈ ರಸ್ತೆಯನ್ನು ಶೀಘ್ರವೇ ದುರಸ್ತಿಪಡಿಸುವುದರ ಜೊತೆಗೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. -ಮೋಹನ್
