ಉಳ್ಳಾಲ: ಉಳ್ಳಾಲ ಸಮುದ್ರ ತೀರದ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಮೊಗವೀರಪಟ್ನದಲ್ಲಿ ಹಮ್ಮಿಕೊಂಡಿರುವ ಬ್ರೇಕ್ ವಾಟರ್ ಕಾಮಗಾರಿಗೆ ಹಾಕಲಾದ ತಡೆ ದಂಡೆಗಳು (ಇನ್ ಶೋರ್ಬಮ್ಸ್ಸ್) ಸಮುದ್ರ ಪಾಲಾಗುತ್ತಿದ್ದು, ಇದರಿಂದ ಸ್ಥಳೀಯರು ಮನೆಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
19ullal 1

19ullal2

19ullal4

uvani 1

Uvani 2

19ullal3

ಪೈಲೆಟ್ ಯೋಜನೆ: ಕರಾವಳಿ ತೀರದಲ್ಲಿ ಉಂಟಾಗುವ ಕಡಲ್ಕೊರೆತಕ್ಕೆ ದಶಕಗಳಿಂದ ಚಾಲ್ತಿಯಲ್ಲಿರುವ ವಿಧಾನಗಳಾದ ಕಲ್ಲುಗಳ ಜೋಡಣೆ, ಕಲ್ಲಿನ ಗೋಡೆಗಳ ನಿರ್ಮಾಣಕ್ಕೆ ಪರ್ಯಾಯವಾಗಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಯೋಜನೆಯಾಗಿ ಸುಮಾರು ೨೩೨ ಕೋಟಿ ರೂ. ವೆಚ್ಚದಲ್ಲಿ ಎಡಿಬಿ ಯೋಜನೆಯಡಿ ಉಳ್ಳಾಲವನ್ನು ಪೈಲಟ್ ಯೋಜನೆಯಾಗಿ ಆರಿಸಿದೆ. ಇದು ಎರಡು ಬ್ರೇಕ್ ವಾಟರ್ಗಳ ಪುನರ್ನಿರ್ಮಾಣ, ಆಳ ಸಮುದ್ರದಲ್ಲಿ ಎರಡು ಬಂಡೆ ಸಾಲುಗಳ ನಿರ್ಮಾಣ (ಆಫ್ ಶೋರ್ ರೀಪ್ಸ್), ಕಡಲ ತೀರದಲ್ಲಿ ನಾಲ್ಕು ತಡೆ ದಂಡೆಗಳ ನಿರ್ಮಾಣ (ಇನ್ ಶೋರ್ಬಮ್ಸ್ಸ್) ಹಾಗೂ ಎರಡು ಮರಳು ಪೂರಣ ಕಾಮಗಾರಿಗಳನ್ನು ಒಳಗೊಂಡಿದೆ. ಕಳೆದ ವರ್ಷ ತಡೆ ದಂಡೆ ನಿರ್ಮಾಣಕ್ಕೆ ಟೆಂಡರು ಪಡೆದಿರುವ ಕಂಪೆನಿ ಮೊಗವೀರಪಟ್ಣದಲ್ಲಿ ಕಾಮಗಾರಿ ಪ್ರಾರಂಭಿಸಿದೆ.

ಭೀತಿಯ ವಾತಾವರಣ : ಎಂಟು ತಿಂಗಳ ಹಿಂದೆ ಆರಂಭಗೊಂಡಿರುವ ಕಾಮಗಾರಿ ಸ್ಥಳೀಯರಿಗೆ ಯಾವುದೇ ಸಮಾಧಾನಕರವಾಗಿಲ್ಲ. ಹೊಯ್ಗೆ ತುಂಬಿಸಿದ ಪಾಲಿಮರ್ ಗೋಣಿಚೀಲಗಳೆಲ್ಲವೂ ಸಮುದ್ರದ ನೀರಿನಲ್ಲಿ ಕೊಚ್ಚಿಹೋಗುತ್ತಿವೆ. ಕಡಲ್ಕೊರೆತ ಪೀಡಿತ ಪ್ರದೇಶಗಳಾದ ಕೋಟೆಪುರ, ಕೈಕೋ, ಸುಭಾಷನಗರ, ಹಿಲೇರಿಯಾನಗರಗಳಲ್ಲಿ ಬಂಡೆಕಲ್ಲುಗಳನ್ನು ಹಾಕಿ ನೀರನ್ನು ತಡೆಹಿಡಿಯಲಾಗುತ್ತಿದೆ. ಆದರೆ ಪ್ರಾಥಮಿಕ ಹಂತದ ಕಾಮಗಾರಿ ಮೊಗವೀರಪಟ್ನದಲ್ಲಿ ಆರಂಭಗೊಂಡು ಹಾಕಿರುವ ತಡೆದಂಡೆಗಳು ಸಮುದ್ರಪಾಲಾಗುತ್ತಿರುವುದರಿಂದ ಮಳೆಗಾಲದಲ್ಲಿ ಈ ಭಾಗದ ಮನೆಮಂದಿ ಭೀತಿಯಿಂದಲೇ ಜೀವನ ನಡೆಸಬೇಕಾಗಿದೆ.

ನೀರಿಗೆ ಹೋಮ ಇಟ್ಟಂತಾಗಿದೆ :
ಕಾಮಗಾರಿ ಆರಂಭದಿಂದ ಗುತ್ತಿಗೆದಾರರು ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುತ್ತಿಲ್ಲ. ಗೋಣಿಚೀಲ ಬೇಡ ಕಲ್ಲುಗಳನ್ನು ಹಾಕಿ ಎಂದು ಹೇಳಿದರೂ ಕೇಳುತ್ತಿಲ್ಲ. ಇದರಿಂದ ಮೊಗವೀರಪಟ್ನದಲ್ಲಿ ಎರಡು ಮನೆಗಳ ಅಂಗಳಗಳು ಸಮುದ್ರಪಾಲಾಗುತ್ತಿವೆ. ಕಳೆದ ವರ್ಷ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಪರಿಹಾರದ ಭರವಸೆಯನ್ನು ನೀಡಿದ್ದರು. ಆದರೆ ಮನೆಗಳನ್ನು ಕಳೆದುಕೊಂಡವರಿಗೆ ಸಿಕ್ಕಿರುವುದು ಕೇವಲ ರೂ.೨,೫೦೦ ಮಾತ್ರ. ಪ್ರತೀ ಮಳೆಗಾಲದಲ್ಲೂ ಬದುಕು ನರಕಸದೃಶವಾಗಿದೆ. ಬ್ರೇಕ್ ವಾಟರ್ ಕಾಮಗಾರಿಗೆಂದು ಸರಕಾರದ ಕೋಟ್ಯಂತರ ರೂ ವ್ಯಯಿಸಿ ನಡೆಸುತ್ತಿರುವ ಕಾಮಗಾರಿ ಸಮುದ್ರ ಪಾಲಾಗುತ್ತಿದ್ದು, ಸರಕಾರದ ದುಡ್ಡೆಲ್ಲಾ ನೀರಿಗೆ ಹೋಮ ಇಟ್ಟಂತಾಗಿದೆ ಎನ್ನುತ್ತಾರೆ ಸ್ಥಳೀಯ ಶಿವಾಜಿ ಈಜುಗಾರ ಸದಸ್ಯರಾದ ಮೋಹನ್ ಕೋಟ್ಯಾನ್.

ಬ್ರೇಕ್ ವಾಟರ್ ಪುನರ್ ನಿರ್ಮಾಣವಾಗದೆ ಸಮಸ್ಯೆ
ಉಳ್ಳಾಲದಲ್ಲಿ ಕಳೆದ ಮೂರು ದಶಕಗಳಲ್ಲಿ ಕಾಡಿದ ಕಡಲ್ಕೊರೆತಕ್ಕೆ ಬೆಂಗರೆ ಅಳಿವೆ ಬಾಗಿಲಿನಲ್ಲಿ ನಿರ್ಮಿಸಿದ ಬ್ರೇಕ್ ವಾಟರ್ ಮುಖ್ಯ ಕಾರಣವಾಗಿತ್ತು. ಶಾಶ್ವತ ಯೋಜನೆಯಲ್ಲಿ ಒಟ್ಟು ನಾಲ್ಕು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಪ್ರಥಮ ಹಂತದಲ್ಲಿ ಬ್ರೇಕ್ ವಾಟರ್ ಪುನರ್ ನಿರ್ಮಾಣ ಕಾರ್ಯ, ಬಳಿಕ ಆಳ ಸಮುದ್ರದಲ್ಲಿ ಬಂಡೆ ಸಾಲುಗಳ ನಿರ್ಮಾಣ, ಮೂರನೇ ಕಾಮಗಾರಿ ಕಡಲ ತೀರದಲ್ಲಿ ತಡೆ ದಂಡೆಗಳ ನಿರ್ಮಾಣವಾಗಬೇಕಿತ್ತು. ಆದರೆ ಮೂರನೇ ಕಾಮಗಾರಿ ಆರಂಭದಲ್ಲೇ ಪ್ರಾರಂಭಿಸಿರುವುದೇ ತಡೆ ದಂಡೆಗಳು ಸಮುದ್ರ ಪಾಲಾಗಲು ಕಾರಣ ಎನ್ನಲಾಗಿದೆ. ಮೂರನೇ ಕಾಮಗಾರಿಗೆ ವರ್ಷದ ಹಿಂದೆ ಟೆಂಡರ್ ಆಗಿತ್ತು. ಉಳಿದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಪ್ರಾರಂಭವಾಗಬೇಕಾಗಿದೆ.

ಮರಳು ತುಂಬಿದ ಜಿಯೋಟೆಕ್ಸ್ ಟೈಲ್ ಮೆಗಾ ಬ್ಯಾಗ್ಗಳಲ್ಲಿ ತಡೆದಂಡೆ
ಜರ್ಮನಿ ಟೆಕ್ನಾಲಜಿ ಹೊಂದಿರುವ ಜಿಯೋಟೆಕ್ಸ್ ಟೈಲ್ ಮೆಗಾ ಬ್ಯಾಗ್ಗಳಲ್ಲಿ ಮರಳು ತುಂಬಿಸಿ ತಡೆ ದಂಡೆಗಳಾಗಿ ನಿರ್ಮಿಸುತ್ತಿದ್ದು, ನಾಲ್ಕು ತಡೆ ದಂಡೆಗಳಲ್ಲಿ ಮೊದಲನೆ ತಡೆ ದಂಡೆಯನ್ನು ಮೊಗವೀರಪಟ್ಣದಲ್ಲಿ ನಿರ್ಮಿಸಲಾಗುತ್ತಿದೆ. ಮೂರು ಮಾದರಿಯ ಬ್ಯಾಗ್ಗಳಲ್ಲಿ ಮರಳು ತುಂಬಿಸಲಾಗುತ್ತಿದ್ದು, ಸಮುದ್ರದ ಹೊಡೆತಕ್ಕೆ ಕೆಲವೊಂದು ಬ್ಯಾಗ್ಗಳ ಹೊಲಿಗೆ ಬಿಟ್ಟು ಮರಳು ಹೊರ ಬಂದಿದೆ.

ಭಾರತದಲ್ಲಿ ಪ್ರಥಮ ದೊಡ್ಡ ಯೋಜನೆ
ಈ ಮಾದರಿಯ ತಂತ್ರಜ್ಞಾನವನ್ನು ಆಸ್ಟೇಲಿಯಾದ ಸಮುದ್ರ ತೀರದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ನಡೆಸಿದ್ದು, ಭಾರತದಲ್ಲಿ ಅದರಲ್ಲೂ ಉಳ್ಳಾಲದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಥಮ ಬಾರಿಗೆ ಅಳವಡಿಸಲಾಗುತ್ತಿದೆ. ತಡೆ ದಂಡೆ ನಿರ್ಮಾಣದಿಂದ ಬೀಚ್ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಎನ್ನುತ್ತಾರೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳು.

ಸ್ಥಳೀಯರ ಸಹಕಾರ ಅಗತ್ಯ : ಸಮುದ್ರದ ರಭಸಕ್ಕೆ ತಡೆದಂಡೆಗಳು ನೀರಿನಲ್ಲಿ ಹೋಗುವುದು ನಷ್ಟವೇ ಸರಿ. ಆದರೆ ಮನೆಗಳು ನೀರಿನಲ್ಲಿ ಹೋದಲ್ಲಿ ಇನ್ನಷ್ಟು ನಷ್ಟ ಆಗಬಹುದು. ಮಳೆಯಿಂದ ಕಾಮಗಾರಿಗೆ ಅಡಚಣೆಯುಂಟಾಗಿದೆ. ಮುಂದೆ ಮಳೆ ಕಡಿಮೆಯಾದಂತೆ ಕಾಮಗಾರಿಯನ್ನು ಮತ್ತೆ ಹಮ್ಮಿಕೊಳ್ಳಲಾಗುವುದು. ಅಷ್ಟರವರೆಗೆ ಸ್ಥಳೀಯರು ಸಹಕರಿಸಬೇಕು ಅನ್ನುತ್ತಾರೆ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಕಂಪೆನಿಯ ಎಂಜಿನಿಯರ್ ಓರ್ವರು.

By suddi9

Leave a Reply

Your email address will not be published. Required fields are marked *