ಬಂಟ್ವಾಳ : ಸಂಚಾರ ಮುಕ್ತಗೊಳ್ಳುವ ಮುನ್ನವೇ ಕಿರು ಸೇತುವೆಯೊಂದನ್ನು ರಾಜಕೀಯ ಫುಡಾರಿಗಳ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಉದ್ಘಾಟನೆಗೆ ಹಸಿರು ನಿಶಾನೆ ತೋರಿದ ಘಟನೆ ಪಾಣೆಮಂಗಳೂರು ಎಂಬಲ್ಲಿ ಮಂಗಳವಾರ ನಡೆದಿದೆ.
ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಪಾಣೆಮಂಗಳೂರು ಪೇಟೆಯ ಸಾಲುಮರ ಕಿರು ಸೇತುವೆ ಪುನರ್ ನಿರ್ಮಾಣಕ್ಕೆ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ, ಸ್ಥಳೀಯರ ಶಾಸಕರೂ ಆಗಿರುವ ಬಿ ರಮಾನಾಥ ರೈ ಅವರ ವಿಶೇಷ ಮುತುವರ್ಜಿ ಮೇರೆಗೆ ಸುಮಾರು 1.25 ಕೋಟಿ ರೂಪಾಯಿ ಮಂಜೂರಾಗಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು.

16 June Salumara
ಜೂನ್ ಮೊದಲ ವಾರದಲ್ಲಿ ಸಂಚಾರ ಮುಕ್ತಗೊಳ್ಳುವ ಭರವಸೆಯಿಂದ ಕಾಮಗಾರಿ ಆರಂಭಿಸಲಾಗಿತ್ತಾದರೂ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಕಾಮಗಾರಿ ವಿಳಂಗೊಂಡು ಸೇತುವೆ ಇನ್ನೂ ಸಂಚಾರ ಮುಕ್ತಗೊಳ್ಳಲು ಯೋಗ್ಯವಾಗಿಲ್ಲ. ಈ ನಡುವೆ ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಅವರ ವಿರುದ್ದ ತೊಡೆತಟ್ಟಿದ ಸ್ವಪಕ್ಷೀಯ ಸ್ಥಳೀಯ ಫುಡಾರಿಗಳು ರಾಜಕೀಯ ಪ್ರತಿಷ್ಠೆ ಮರೆಯಲು ಮುಂದಾಗಿ ಲೋಕೋಪಯೋಗಿ ಇಂಜಿನಿಯರ್ ಮೊರೆ ಹೋಗಿ ತರಾತುರಿಯಲ್ಲಿ ಸೇತುವೆನ್ನು ಸಾಂಕೇತಿಕ ಉದ್ಘಾಟನೆಗೆ ದಿನ ನಿಗದಿಪಡಿಸುವಂತೆ ಒತ್ತಾಯಪಡಿಸಿದ್ದಾರೆ. ಕೈ ಫುಡಾರಿಗಳ ಪ್ರಭಾವಕ್ಕೆ ಮಣಿದ ಪಿಡಬ್ಲ್ಯುಡಿ ಇಂಜಿನಿಯರ್ ಉಮೇಶ್ ಭಟ್ ಮಂಗಳವಾರ ಸೇತುವೆ ಉದ್ಘಾಟನೆಗೆ ದಿನನಿಗಡಿಪಡಿಸಿದ್ದರು. ಈ ಬಗ್ಗೆ ಸಚಿವ ರಮಾನಾಥ ರೈ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದವರಾಗಲೀ, ಇಲಾಖಾಧಿಕಾರಿಗಳಾಗಲೀ ಸ್ಥಳೀಯ ಪುರಸಭಾ ಸದಸ್ಯರಿಗಾಗಲೀ, ಮಾಧ್ಯಮ ಪ್ರತಿನಿಧಿಗಳಿಗಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ.
ಸೇತುವೆ ಉದ್ಘಾಟನೆಗೆ ಸ್ಥಳಕ್ಕೆ ಬರುತ್ತಲೇ ಸಚಿವ ರಮಾನಾಥ ರೈ ಪತ್ರಕರ್ತರ ಅನುಪಸ್ಥಿತಿ ಕಂಡು ಕಾರ್ಯಕ್ರಮ ಆಯೋಜಕರೊಂದಿಗೆ ತೀವ್ರ ಕೆಂಡಾಮಂಡಲರಾಗಿದ್ದಾರೆ. ಒಂದೂಕಾಲು ಕೋಟಿಯಷ್ಟು ಬೃಹತ್ ಮೊತ್ತದ ಕಾಮಗಾರಿ ಉದ್ಘಾಟನೆಗೆ ಮಾಧ್ಯಮ ಮಂದಿಗೆ ಮಾಹಿತಿ ನೀಡದೆ ಸಚಿವರ ಅಭಿವೃದ್ದಿ ಕಾರ್ಯಕ್ರಮವನ್ನು ಕತ್ತಲಲ್ಲಿರಿಸುವ ಮೂಲಕ ಕಾರ್ಯಕ್ರಮ ಆಯೋಜಕರು ರಾಜಕೀಯ ಸಣ್ಣತನ ಮೆರೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕೌನ್ಸಿಲರ್ ಚಂಚಲಾಕ್ಷಿ ಅವರು ಸೇತುವೆ ಇನ್ನೂ ಸಂಚಾರ ಮುಕ್ತಗೊಂಡಿಲ್ಲ. ಇದು ಇಲಾಖೆ ವತಿಯಿಂದ ನಡೆದ ಅಧಿಕೃತ ಕಾರ್ಯಕ್ರಮವೂ ಅಲ್ಲ. ಯಾರೋ ಒಂದಿಬ್ಬರು ಸ್ಥಳೀಯರು ಸೇರಿ ಕಾರ್ಯಕ್ರಮ ಆಯೋಜಿಸಿ ಸಚಿವರನ್ನು ದಾರಿ ತಪ್ಪಿಸಿದ್ದಾರೆ. ಕೊನೆ ಕ್ಷಣದಲ್ಲಿ ಪಿಡಬ್ಲ್ಯುಡಿ ಇಂಜಿನಿಯರ್ ಹಾಗೂ ಪುರಸಭಾ ಇಂಜಿನಿಯರ್ ನೀಡಿದ ಮಾಹಿತಿಯಂತೆ ನಾನು ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದಿದ್ದಾರೆ.

By suddi9

Leave a Reply

Your email address will not be published. Required fields are marked *