ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂಚಾರಿ ಸಮಸ್ಯೆ ನಿವಾರಣೆ ಮತ್ತು ಇಲ್ಲಿನ ಹೊಂಡಮಯ ಸರ್ವೆಸ್ ರಸ್ತೆಯನ್ನು ಒಂದು ವಾರದೊಳಗೆ ದುರಸ್ತಿಪಡಿಸಿ ಸಂಚಾರ ಸುಗಮಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಇಲ್ಲಿನ ನೇತ್ರಾವತಿ ನದಿ ಮೇಲಿನ ಸೇತುವೆ ಬದಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ದೀಪಗಳನ್ನು ಬದಲಿಸಿ ಫ್ಲೊರೋಸೆಂಟ್ ಪ್ರಖರ ದೀಪ ಅಳವಡಿಸುವುದು ಸೇರಿದಂತೆ ಬಿ.ಸಿ.ರೋಡ್ ಪ್ರಮುಖ ವೃತ್ತದಲ್ಲಿ ಹೈಮಾಸ್ಕ್ ದೀಪ ಅಳವಡಿಕೆ, ಕಿರು ವೃತ್ತ ಮತ್ತು ತಡೆಬೇಲಿ ನಿರ್ಮಾಣ, ಬಂಟ್ವಾಳ ಪೇಟೆ, ಬೈಪಾಸ್ ರಸ್ತೆ, ಪಾಣೆಮಂಗಳೂರು ರಸ್ತೆಯಿಂದ ಪ್ರಮುಖ ವೃತ್ತ ಸಂಪರ್ಕಿಸುವಲ್ಲಿ ಪುರಸಭೆ ವತಿಯಿಂದ ರಸ್ತೆಗೆ ದಿಬ್ಬ ರಚನೆ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

1 (3)

2 (4)

ಬಂಟ್ವಾಳ ಬೈಪಾಸ್ ಸಹಿತ ಮೆಲ್ಕಾರ್ನಲ್ಲಿ ಬಸ್ನಿಲ್ದಾಣ ಮತ್ತು ಬಿ.ಸಿ.ರೋಡಿನಲ್ಲಿ ಮಂಗಳೂರು ಕಡೆಗೆ ಹೋಗುವ ಬಸ್ ರಸ್ತೆಯಲ್ಲಿ ನಿಲ್ಲದಂತೆ ತಡೆಬೇಲಿ ನಿರ್ಮಾಣ, ಪಾಣೆಮಂಗಳೂರು ಶ್ರೀ ಸತ್ಯದೇವತೆ ಗುಡಿ ಬಳಿ ಇರುವ ಹಳೆ ಹೆದ್ದಾರಿಯಲ್ಲಿ ಡಿವೈಡರ್ ತೆರವುಗೊಳಿಸಿ ಬಸ್ ನಿಲುಗಡೆ ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡರು.
ಇಲ್ಲಿನ ರೈಲ್ವೇ ಹಳೆ ಮೇಲ್ಸೇತುವೆ ಬಳಿ ಮತ್ತು ಕೈಕಂಬ ಒಳಚರಂಡಿಗೆ ಕುಸಿದ ಕಾಂಕ್ರೀಟು ಮುಚ್ಚಳ ದುರಸ್ತಿ, ಸರ್ವೆಸ್ ರಸ್ತೆ ವಿಸ್ತರಣೆಗೆ ಹೆದ್ದಾರಿ ಸಚಿವರು ಸೂಚಿಸಿದರು. ಬಿ.ಸಿ.ರೋಡ್-ಕೈಕುಂಜೆ ರಸ್ತೆ ಬದಿ ತೆರವುಗೊಳಿಸಿ ವಾಹನ ನಿಲುಗಡೆಗೆ ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ಬಡ್ಡಕಟ್ಟೆಯಲ್ಲಿ ವಾಹನ ನಿಲುಗಡೆಗೆ ಸ್ಥಳ ಕಾದಿರಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಒಟ್ಟು 20 ಕಡೆ ನೋ ಪಾರ್ಕಿಂಗ್, 20 ಬ್ಯಾರಿಕೇಡ್ ಮತ್ತು ಸಿಸಿ ಕ್ಯಾಮರಾ ಅಳವಡಿಸಲು ನಿರ್ಣಯಿಸಲಾಯಿತು.
ಬಂಟ್ವಾಳ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗೊಂಡ ವಾಹನ ಸಾಗಿಸುವ ಟೋಯಿಂಗ್ ವಾಹನ ಒದಗಿಸಲು ಸಭೆ ನಿರ್ಣಯಿಸಿತು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ತಹಶೀಲ್ದಾರ್ ಪುರಂದರ ಹೆಗ್ಡೆ, ಹೆದ್ದಾರಿ ಪ್ರಾಧಿಕಾರ ಸಲಹೆಗಾರ ಎ.ಖಾನ್, ಎಸ್ಪಿ ಡಾ. ಶರಣಪ್ಪ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಇನ್ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ನಗರ ಠಾಣಾಕಾರಿ ನಂದಕುಮಾರ್, ಸಂಚಾರಿ ಠಾಣಾಧಿಕಾರಿ ಚಂದ್ರಶೇಖರಯ್ಯ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್ ಮತ್ತಿತರರು ಇದ್ದರು.
ಬಾಕ್ಸ್ಗೆ:
ಬಿ.ಸಿ.ರೋಡ್ನಲ್ಲಿ ಸಂಚಾರಿ ಠಾಣೆಗೆ 13 ಸೆಂಟ್ಸ್ ಜಮೀನು ಮೀಸಲು, ಬಿ.ಸಿ.ರೋಡ್ನ ಪೊಳಲಿ ದ್ವಾರದಿಂದ ಮೊಡಂಕಾಪು ರೈಲ್ವೆ ಮೇಲ್ಸೆತುವೆ ತನಕ ಹೆದ್ದಾರಿ ವಿಸ್ತರಣೆಗಾಗಿ ರೂ 1. 50 ಕೋಟಿ ಮೊತ್ತದ ಅನುದಾನ ಮೀಸಲು, ಬೆಂಜನಪದವು ಕ್ರೀಡಾಂಗಣ ನಿರ್ಮಾಣಕ್ಕೆ 9 ಎಕ್ರೆ ಜಮೀನು ಮೀಸಲು ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

By suddi9

Leave a Reply

Your email address will not be published. Required fields are marked *