ಬಂಟ್ವಾಳ: ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದೆವು ಎನ್ನುವ ಅಹಂಕಾರದ ಮನೋಭಾವವನ್ನು ಬಿಟ್ಟು ಗ್ರಾಮದ ಸಮಗ್ರ ಅಭಿವೃದ್ದಿಯ ಚಿಂತನೆಯನ್ನು ಮೈಗೂಡಿಸಿಕೊಳ್ಳಿ, ಗ್ರಾಮೀಣ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಯೋನುಖರಾಗಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಗ್ರಾ.ಪಂ.ನಲ್ಲಿ ನೂತನವಾಗಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳಿಗೆ ಕರೆ ನೀಡಿದರು.
ರಾಜ್ಯದ ನಂ.1 ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ರಾ.ಸ್ವ.ಸಂಘದ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿನಂದಿಸಿದರು. 
ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಗ್ರಾಮಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಅಭಿನಂದಿಸಿ ದಿಕ್ಸೂಚಿ ಭಾಷಣ ಮಾಡಿದರು. ಗ್ರಾ.ಪಂ ಚುನಾವಣೆಯ ಗೆಲುವು ಅಭ್ಯರ್ಥಿಗಳ ಗೆಲುವಲ್ಲ. ಬದಲಿಗೆ ಅವರ ಗೆಲುವಿಗೆ ಕಾರಣರಾದ ಹಾಗೂ ಪಕ್ಷಕ್ಕೋಸ್ಕರ ರಾತ್ರಿ ಹಗಲೆನ್ನದೆ ದುಡಿದ ಕಾರ್ಯಕರ್ತರ ಗೆಲುವು ಎಂದರು.
ಇದೇ ಗೆಲುವಿನ ಉತ್ಸಾಹ ಮುಂದೆ ಬರುವ ತಾ,ಪಂ., ಜಿ.ಪಂ., ಹಾಗೂ ವಿಧಾನ ಸಭಾ ಚುನವಾಣೆಯವರೆಗೂ ಇರಬೇಕು ಎಂದ ಅವರು ಪತ್ರಿಯೊಬ್ಬ ಬಿಜೆಪಿ ಬೆಂಬಲಿತ ಗ್ರಾಮಪಂಚಾಯತ್ ಸದಸ್ಯನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಗೌರವವನ್ನು ಹೆಚ್ಚಿಸುವಂತಹ ಕೆಲಸ ಮಾಡಬೇಕು, ಅವರ ಹೆಸರನ್ನು ಕೇವಲ ಮತ ಕೇಳಲು ಮಾತ್ರವಲ್ಲ ಅಭಿವೃದ್ದಿ ಕೆಲಸಗಳಿಗೂ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ನರೇಂದ್ರ ಮೋದಿ ಆಡಳಿತ ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ದೊಡ್ಡ ಪರಿವರ್ತನೆಗೆ ನಾಂದಿ ಹಾಡಿದೆ, ಭಯೋತ್ಪಾದಕತೆ ನಿಗ್ರಹದಿಂದ ತೊಡಗಿ, ಎಲ್ಲಾ ನಡೆ ನುಡಿ, ಇಡೀ ವಿಶ್ವವೇ ಭಾರತದತ್ತ ಮುಖಮಾಡುವಂತೆ ಮಾಡಿದೆ ಎಂದರು.
ಗ್ರಾಮಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ನ ಅಧಿಕಾರದ ಅಹಂಕಾರಕ್ಕೆ ಮತದಾರರು ತಕ್ಕ ಪಾಠಕಲಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳನ್ನು ಗೆಲ್ಲಿಸಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ತಮ್ಮ ತಮ್ಮ ವಾರ್ಡ್ ಗಳಲ್ಲಿ ನಂಬರ್ 1 ಸ್ಥಾನಗಳಿಸಿ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಅಭಿನಂದನೆ ಸ್ವೀಕರಿಸಿ ಮಾತನಾಡಿ ಅಭಿನಂದನೆ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಜ್ಜನಿಕೆಯ ಆದರ್ಶದ ರಾಜಕಾರಣ ಮಾಡುವ ಮೂಲಕ ಪಕ್ಷಕ್ಕೆ ಗೌರವ ತಂದುಕೊಡುವ ಕೆಲಸ ಮಾಡುತೇನೆ ಎಂದರು. ಚುನಾವಣೆಯಲ್ಲಿ ಗೆದ್ದು ಎಲ್ಲಾ ಜನಪ್ರತಿನಿಧಿಗಳು ತಮ್ಮ ತಮ್ಮ ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ರೂಪಿಸುವ ಪ್ರಯತ್ನ ನಡೆಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿಕೆ ಭಟ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನಸಭೆಯ ಮಾಜಿ ಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಮಾತನಾಡಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಅಭಿನಂದನೆ ಭಾಷಣ ಮಾಡಿದರು. ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ. ಜಿಲ್ಲಾ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ನಳಿನಿ ಶೆಟ್ಟಿ, ಬಾಲಕೃಷ್ಣ ಪಾಣಜಾಲು, ಜಯಶ್ರೀ, ಗಿರಿಜ, ಶೈಲಜಾ ಕೆ.ಟಿ.ಭಟ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವದಾಸ ಶೆಟ್ಟಿ ಸ್ವಾಗತಿಸಿದರು, ದಿನೇಶ್ ಅಮ್ಟೂರು ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.



