ಬಂಟ್ವಾಳ: ಪುರಸಭಾ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿರುವ ಕಸಸಮಸ್ಯೆ ಹಾಗೂ ಕೊಳಚೆ ತುಂಬಿದ ಚರಂಡಿಗಳು “ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ. ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಕಂಡುಬರುವ ಕಸದ ರಾಶಿಗಳು ಕೊಳಚೆ ತುಂಬಿಕೊಂಡು ನಾರುತ್ತಿರುವ ಚರಂಡಿಗಳು ಇಲ್ಲಿನ ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಉಂಟುಮಾಡಿದೆ.ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ನಾಲ್ಕೈದು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಮಲೇರಿಯಾ ಭೀತಿಯೂ ಎದುರಾಗಿದ್ದರೂ ಕೊಳಚೆ -ಕಸಗಳು ನಮಗೆ ಅನ್ವಯಿಸುವುದಿಲ್ಲ ಎನ್ನುವ ರೀತಿ ಯಲ್ಲಿ ಬಂಟ್ವಾಳ ಪುರಸಭೆ ವರ್ತಿಸುತ್ತಿದೆ.
ಕಳೆದ ಹಲವು ವರ್ಷಗಳಿಂದ ಬಂಟ್ವಾಳ ಪುರಸಭೆಗೆ ಕಸದ ವಿಲೇವಾರಿ ಕಗ್ಗಂಟಾಗಿ ಹೋಗಿದೆ. ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯಲ್ಲಿ ಪುರಸಭಾ ಆಡಳಿತ ಹಿನ್ನಡೆ ಅನುಭವಿಸಿದ್ದೇ, ಬಂಟ್ವಾಳದಲ್ಲಿ ಕಸ ವಿಷವಾಗಲು ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಮನೆಮನೆ ಕಸ ಸಂಗ್ರಹ, ಅಂಗಡಿಗಳಿಂದ ಕಸ ಸಂಗ್ರಹ ಹಾಗೂ ರಕ್ಕಸ ಗಾತ್ರದಲ್ಲಿ ಬೆಳೆದುನಿಂತಿರುವ ಕಸವಿಲೇವಾರಿ ಯಲ್ಲೂ ಪುರಸಭೆ ಸಂಪೂರ್ಣ ಎಡವಿದೆ.


ಹೇಳೋರಿಲ್ಲ-ಕೇಳೋರಿಲ್ಲ
ಪುರಸಭೆಯ ಒಂದೆರಡು ಸಭೆಗಳಲ್ಲಿ ಬಂಟ್ವಾಳದ ಕಸದ ಸಮಸ್ಯೆಗೆ ಜಿಲ್ಲಾಧಿಕಾರಿಯೇ ಕಾರಣ ಎಂಬರ್ಥದಲ್ಲಿ ಚರ್ಚ್ ನಡೆದು ಬಳಿಕದ ಬೆಳವಣಿಗೆಯಲ್ಲಿ ಕಂಚಿನಡ್ಕ ಪದವಿನ ಕಾಮಗಾರಿ ಕುರಿತು ಸ್ವಲ್ಪ ಬೆಳವಣಿಗೆ ಕಂಡಿದೆಯಾದರೂ ಬಳಿಕ ಆ ಪ್ರಕ್ರಿಯೆ ಯಲ್ಲಿ ಯಾರೊಬ್ಬರಿಗೂ ಉತ್ಸಾಹವಿಲ್ಲ. ನಗರದ ವಿವಿದೆಡೆ ರಾಶಿ ಬಿದ್ದಿರುವ ಕಸದ ರಾಶಿಯಿಂದ ನಗರದ ಅಂದ ಕದಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿ ಪ್ರಕಟ ಗೊಳ್ಳುತ್ತಿದ್ದರೂ ಬಂಟ್ವಾಳ ಪುರಸಭೆ ದಿವ್ಯ ನಿರ್ಲಕ್ಷ ವಹಿಸುತ್ತಿದ್ದು, ಹೇಳೋರಿಲ್ಲ, ಕೇಳೋರಿಲ್ಲ ಎಂಬ ಸ್ಥಿತಿ ಉಂಟಾಗಿದೆ.
ಈ ನಡುವೆ ಕಸವನ್ನು ಸಮರ್ಪಕ ವಿಲೇವಾರಿ ಮಾಡದ ಆರೋಪದ ಹಿನ್ನಲೆಯಲ್ಲಿ ಶರದ್ ಶೆಟ್ಟಿ ಅವರ ಗುತ್ತಿಗೆಯನ್ನು ಅವರ ಟೆಂಡರ್ನ ಅವಧಿ ಮುಗಿಯುವ ಮೊದಲೇ ಗುತ್ತಿಗೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ಆಡಳಿತ ಎಮ್ಮೆಕೆರೆ ಸಲಾಂ ಎಂಬವರಿಗೆ ಕಸ ವಿಲೇವಾರಿಯ ಜವಾಬ್ದಾರಿ ಹೊರಿಸಿದೆ. ಆದರೆ ಹೊಸದಾಗಿ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರ ತ್ಯಾಜ್ಯ ನಿರ್ವಹಣೆಯೂ ಸಾರ್ವಜನಿಕರಿಗೆ ತೃಪ್ತಿ ತಂದಿಲ್ಲ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ದಾರಿಯಲ್ಲಿ ಸಾರ್ವಜನಿಕರಿಗೆ ಸ್ವಾಗತಿಸಲು ಕಸದ ರಾಶಿ ರಾಶಿ. ಪುರಸಭೆಯ ಬೋಗೊಡಿ, ಕೈಕಂಬ, ದೀಪಿಕಾ ಸ್ಕೂಲ್ ಸೇರಿದಂತೆ ಎಲ್ಲಾ ಕಡೆ ಕಸದ ರಾಶಿ ಬಿದ್ದಿದೆ. ಮೂರು ದಿನಕ್ಕೊಮ್ಮೆ ರಸ್ತೆ ಪಕ್ಕದಲ್ಲಿ ರಾಶಿ ಬೀಳುವ ತ್ಯಾಜ್ಯ ರಾಶಿಯನ್ನು ಮಂಗಳೂರಿಗೆ ಸಾಗಿಸಲಾಗುತ್ತಿದೆಯಾದರೂ, ರಾಶಿ ಹಾಕಿದಸ್ಥಳಗಳಲ್ಲಿ ಉಂಟಾಗಿರುವ ಕೊಳಚೆಗಳು ಗಬ್ಬು ನಾಥ ಬೀರುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿ ಪಸ್ತುತ ಬೆರಳೆಣಿಕೆಯ ನೌಕರರು ಮಾತ್ರ ಶುಚಿತ್ವದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಪೇಟೆ ಸೇರಿದಂತೆ ಎಲ್ಲಾ ಕಡೆ ಕಸದ ರಾಶಿ ಕಂಡುಬರುತ್ತಿದೆ.
ಚರಂಡಿಗಳಲ್ಲಿ ಕೊಳಚೆ ನೀರು..
ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಿ.ಸಿ.ರೋಡಿನಲ್ಲಿ ಚತುಷ್ಪಥದ ಹೆಸರಿನಲ್ಲಿ ರಸ್ತೆ ಅಗಲೀಕರಣವಾಗಿದ್ದರೂ, ಇಲ್ಲಿನ ಚರಂಡಿಗಳ ನಿರ್ಮಾಣಕಾರ್ಯ ನಡೆದಿಲ್ಲ. ಬಂಟ್ವಾಳ ಪುರಸಭೆಯೂ ಇಲ್ಲಿ ಚರಂಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸೋತಿದ್ದು, ಬಿ.ಸಿ.ರೋಡು ಸುತ್ತಮುತ್ತ ಕೊಳಚೆ ತುಂಬಿರುವ ಚರಂಡಿಗಳು ಭಯ ಹುಟ್ಟಿಸುತ್ತಿವೆ. ಪೊಳಲಿ ದ್ವಾರದ ಬಳಿಯಲ್ಲಿ ಕಾಣಸಿಗುವ ಚರಂಡಿಗಳು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಪರಿವರ್ತನೆ ಹೊಂದಿದೆ.
ಒಟ್ಟಿನಲ್ಲಿ ಕೊಳಚೆ ತುಂಬಿದ ಚರಂಡಿ ಸಮಸ್ಯೆ ಹಾಗೂ ಕಸ ಸಮಸ್ಯೆಯನ್ನು ಬುಡದಿಂದಲೇ ಕಿತ್ತೊಗೆದು ನಿರ್ಮಲ ಬಂಟ್ವಾಳ ವಾಗಿ ಮಾಪರ್ಾಡುಗೊಳಿಸುವ ನಿಟ್ಟಿನಲ್ಲಿ ಪುರಸಭಾ ಆಡಳಿತ ದಿಟ್ಟ ಹೆಜ್ಜೆ ಇಡಬೇಕಾಗಿದೆ.
ರೋಗಭೀತಿ..!
ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಪರಿಸರ ಸ್ವಚ್ಛತೆ ಕಡೆಗೆ ಗಮನಹರಿಸಬೇಕಿದೆ. ಪುರಸಭಾ ವ್ಯಾಪ್ತಿಯಲ್ಲಿನ ತ್ಯಾಜ್ಯ ರಾಶಿಗಳು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಪುರಸಭೆ ಜಂಟಿಯಾಗಿ ಕಾರ್ಯಯೋಜನೆ ರೂಪಿಸಬೇಕಿದೆ.
ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ಹಿಂದಿನ ಗುತ್ತಿಗೆದಾರರು ಜೂ,1 ರ ಬಳಿಕ ಕಸವಿಲೇವಾರಿ ಮಾಡುವುದಿಲ್ಲ ಎಂದು ಪತ್ರ ನೀಡಿದ್ದರಿಂದ, ತಾತ್ಕಾಲಿಕ ವಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಶೀಘ್ರವೇ ಇದಕ್ಕೆ ಸಂಬಂಧಿಸಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಹಾಗೂ ನಿರ್ಮಲ ಬಂಟ್ವಾಳದ ಕನಸು ನನಸಾಗಲು ಸಾರ್ವಜನಿಕರ ಸಹಕಾರ ಬೇಕು..
-ವಸಂತಿಚಂದಪ್ಪ
ಅಧ್ಯಕ್ಷರು, ಬಂಟ್ವಾಳ ಪುರಸಭ

