ಮೂಡುಬಿದರೆ : ಮಳೆಗಾಲ ಆರಂಭವಾಗುತ್ತಿದಂತೆ ರೋಗಗಳನ್ನು ಸೃಷ್ಟಿ ಮಾಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಆದ್ದರಿಂದ ಮಳೆಯ ನೀರು ನಿಲ್ಲದಂತೆ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಕಾಮಗಾರಿ ಮಾಡುವಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಅರುಣ್ ಕುಮಾರ್ ಹೇಳಿದರು.
ಮೂಡುಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಮಂಗಳವಾರ ಸಮಾಜ ಮಂದಿರ ಸಭಾದಲ್ಲಿ ನಡೆದ ಮಲೇರಿಯಾ ವಿರೋಧ ಮಾಸಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಲೇರಿಯಾ ಮತ್ತು ಡೆಂಗ್ಯು ರೋಗಗಳು ಮತ್ತು ಅವುಗಳನ್ನು ತಡೆಯುವ ಬಗ್ಗೆ ಮಾಹಿತಿಯನ್ನು ನೀಡಿದರು.
ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ರೋಟರಿ ಕ್ಲಬ್ನ ಅಧ್ಯಕ್ಷ ಡಾ.ಮುರಳೀಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ನವೀನ್ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸುನಂದ ಸ್ವಾಗತಿಸಿದರು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರ ಆರೋಗ್ಯ ಸಹಾಯಕಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರವಿಕಲಾ ವಂದಿಸಿದರು. ಸಿಬಂದಿ ರಾಘವೇಂದ್ರ ಸಹಕರಿಸಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಅಧಿಕಾರಿಗಳು, ವಲಯದ ವಿವಿಧ ಶಾಲೆಗಳ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
