ಬಂಟ್ವಾಳ: ರಸ್ತೆ, ನೀರು, ದಾರಿ ದೀಪ, ತ್ಯಾಜ್ಯ ನಿರ್ವಹಣೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಸ್ಥರು ಮಂಗಳವಾರ ಪುದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು. ಗ್ರಾಮಸ್ಥರನ್ನು ಕಚೇರಿಯೊಳಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾಯಿತು. ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಲಾಯಿತು. ಬಳಿಕ ಕಚೇರಿಯ ಮುಂಭಾಗ ಜಮಾಯಿಸಿದ ಸಾರ್ವಜನಿಕರ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಗಮನ ಸೆಳೆದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ ನಲ್ಲೂ ರಸ್ತೆ ಸಂಪರ್ಕ ಇಲ್ಲ. ಡಾಮಾರು ರಸ್ತೆ ನಿರ್ವಹಣೆ ಮಾಡಲಾಗುತ್ತಿಲ್ಲ. ದಾರಿ ದೀಪ ಅಳವಡಿಸಲಾಗಿಲ್ಲ. ತ್ಯಾಜ್ಯ ವಸ್ತುಗಳ ವಿಲೇವಾರಿಯೂ ಅಸರ್ಮಪಕವಾಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ನಾಗರಿಕ ಪ್ರಮುಖ ಬಶೀರ್ ತಂಡೇಲ್ ಅವರು ಆರೋಪ ಮಾಡಿದರು.
ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ಕಾರ್ಯಾಲಯ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ ಧರಣಿನಿರತರನ್ನು ಅರ್ಧದಲ್ಲೇ ತಡೆಯಲಾಯಿತು. ಈ ಸಂದರ್ಭ ಅಧಿಕಾರಿಗಳು, ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನಚಕಮಕಿ ನಡೆಯಿತು. ಸರ್ಕಲ್ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಅವರು ಇತ್ತಂಡಗಳ ವಿವಾದವನ್ನು ಬಗೆಹರಿಸಿದರು. ಮನವಿ ಸ್ವೀಕರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿತಾ ಪರಿಹಾರ ಕ್ರಮ ಜರುಗಿಸುವುದಾಗಿ ತಿಳಿಸಿದರು. ಬಳಿಕ ಧರಣಿಯನ್ನು ಹಿಂಪಡೆಯಲಾಯಿತು. ಸ್ಥಳೀಯ ಪ್ರಮುಖರಾದ ಮಹಮ್ಮದ್ ಶಾಫಿ, ಇಕ್ಬಾಲ್, ನೌಶಾದ್, ಖಾದರ್ ಮತ್ತಿತರು ಪಾಲ್ಗೊಂಡರು.
