ಮೂಡುಬಿದರೆ: ಕೈದಿಗಳ ನಾಟಕೋತ್ಸವಕ್ಕೆ ರಾಜ್ಯಸರ್ಕಾರವು ಬಜೆಟ್ ನಲ್ಲಿ 30ಲಕ್ಷರೂಪಾಯಿ ಅನುದಾ ಒದಗಿಸಿದ್ದು ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಮೊತ್ತವನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಯುವಜನಸೇವೆ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಕರ್ನಾಟಕ ಕಾರಾಗೃಹ ಇಲಾಖೆ, ಸಂಕಲ್ಪ ಕಲಾಸಂಘ ಮೈಸೂರು ಹಾಗೂ ಆಳ್ವಾಸ್ ರಂಗಅಧ್ಯಯನ ಕೇಂದ್ರ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ಆರು ದಿನಗಳ ಕಾಲ ನಡೆಯುವ ಕೈದಿಗಳ ರಂಗಯಾತ್ರೆ ನಾಟಕೋತ್ಸವ ರಂಗಯಾತ್ರೆ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈದಿಗಳ ನಾಟಕೋತ್ಸವಕ್ಕೆ ಹೆಚ್ಚಿನ ಅನುದಾನ


ಮಂಗಳೂರು ಜೈಲಿನಲ್ಲಿರುವ ಕೈದಿಗಳಿಗೂ ನಾಟಕ ತರಬೇತಿ ನೀಡುವ ಮೂಲಕ ಅವರ ಮನಪರಿವರ್ತನೆ ಮಾಡಲು ಪ್ರಯತ್ನಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪೊಲೀಸ್ ಮಹಾ ಅಧೀಕ್ಷಕ ಗೋಪಾಲ ಬಿ. ಹೊಸೂರು ಮಾತನಾಡಿ ಸಂಕಲ್ಪ ರಂಗಯಾತ್ರೆಯು ಕೈದಿಗಳ ಮನಸ್ಸನ್ನು ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳ ಮನಸ್ಸನ್ನೂ ಪರಿವರ್ತಸಿದೆ. ಕ್ಷಣದ ಭಾವೋದ್ವೇಗಕ್ಕೆ ಒಳಗಾಗಿ ಅಥವಾ ಅರಿವಿಲ್ಲದೆ ಮಾಡಿದ ತಪ್ಪಿನಿಂದಾಗಿ ಸರಳುಗಳ ಹಿಂದೆ ಬಂಧಿಯಾದ ಕೈದಿಗಳು ಈ ನಾಟಕಗಳ ಮೂಲಕ ಹೊರಗಿನ ಪ್ರಪಂಚವನ್ನು ನೋಡಲು ಸಾಧ್ಯವಾಗಿದೆ. ಜನರಲ್ಲೂ ಕೈದಿಗಳನ್ನು ನೋಡುವ ಮನೋಭಾವ ಬದಲಾಗಿದೆ. ಸರ್ಕಾರ ಇದಕ್ಕೆ ಇನ್ನೂ ಹೆಚ್ಚಿನ ಅನುದಾನ ಒದಗಿಸಿದ್ದಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಾಧ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಕೈದಿಗಳೇ ಪ್ರಸ್ತುತ ಪಡಿಸುವ ಈ ನಾಟಕಗಳನ್ನು ವಿದ್ಯಾರ್ಥಿಗಳೆದುರು ಅಭಿನಯಿಸುವುದು ಅಗತ್ಯ. ಅಪರಾಧ ಜಗತ್ತಿಗೆ ಯುವಜನತೆ ಕಾಲಿಡದಂತೆ ಇದು ಎಚ್ಚರಿಕೆಯನ್ನು ನೀಡುತ್ತದೆ ಎಂದರು.
ಕರ್ನಾಟಕ ಕಾರಾಗೃಹ ಹೆಚ್ಚುವರಿ ಮಹಾ ನಿರೀಕ್ಷಕ ವಿ.ಎಸ್.ರಾಜ, ಸಂಕಲ್ಪದ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಉಪಸ್ಥಿತರಿದ್ದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ರಾಮ್ ಸುಳ್ಯ ಸ್ವಾಗತಿಸಿ ವಂದಿಸಿದರು. ಬಳಿಕ ಕೈದಿಗಳಿಂದ ಎಚ್.ಎಸ್.ಶಿವಪ್ರಕಾಶರ ಮಾರನಾಯಕ ನಾಟಕ ಪ್ರದರ್ಶನಗೊಂಡಿತು.


