ಬಂಟ್ವಾಳ: ಸರಕಾರಿ ಶಾಲೆಗಳ ಬಗೆಗಿನ ಕೀಳರಿಮೆ ಬಿಟ್ಟುಬಿಡಿ, ಸರಕಾರಿ ಶಾಲಾ ಶಿಕ್ಷಕರ ಮಕ್ಕಳೂ ಸರಕಾರಿ ಶಾಲೆಗೆ ಬರಲಿ, ಆಗ ಸರಕಾರಿ ಶಾಲೆಗೆ ಹೆಚ್ಚು ಚೈತನ್ಯ ಬರುತ್ತದೆ ಎಂದು ಪುತ್ತೂರು ವಿವೇಕಾನಂದ ಕಾಲೇಜ್‍ನ ಉಪನ್ಯಾಸಕ ಡಾ| ಶ್ರೀಶ ಕುಮಾರ್ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಅಕ್ಷರ ಹಬ್ಬ ಎನ್ನುವ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸಲಾದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
DSC_6649

0106pkt1

0106pkt1A

0106pkt1B

DSC_6581

DSC_6599

DSC_6611
ಹಳದಿ ಬಸ್ಸುಗಳ ಚುಂಬಕ ಶಕ್ತಿಯ ಪ್ರಭಾವದಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಅನಾಥಾಶ್ರಮಗಳಾಗುವ ಅಪಾಯವಿದೆ ಎಂದು ಆತಂಕವ್ಯಕ್ತಪಡಿಸಿದ ಅವರು ಪೋಷಕರು ಮಕ್ಕಳೊಂದಿಗೆ ದಿನದ ಒಂದು ಗಂಟೆ ಶಿಕ್ಷಣದ ಉದ್ದೇಶಕ್ಕೆ ಮೀಸಲಿಡಿ ಎಂದು ಮನವಿ ಮಾಡಿದರು. ಮಕ್ಕಳ ನಡವಳಿಕೆ ಬಗ್ಗೆ ನಾವೇ ದೂಷಿಸಿಕೊಳ್ಳುವುದು ಸರಿಯಲ್ಲ ಎಂದರು. ಆ ನಡವಳಿಕೆಗೆ ಯಾರು ಪ್ರೇರಣೆ ಎಂಬುದನ್ನು ಪ್ರಶ್ನಿಸಿ ಉತ್ತರ ಕಂಡುಕೊಳ್ಳುವಂತೆ ಮನವಿ ಮಾಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ದಿವಾಕರ ದಾಸ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ವಿದ್ಯಾರ್ಥಿ ದೀಕ್ಷಿತ್ ರಾಯಿ ಅಕ್ಷರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳ ವೈಭವದ ದಿಬ್ಬಣ, ಶಾಲಾ ದೇಗುಲಕ್ಕೆ ಹೊರೆಕಾಣಿಕೆ ಸಮರ್ಪಣೆ, ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯದ ಅಕ್ಷರ ರಥ ಉದ್ಘಾಟನೆ, ವಿದ್ಯಾರ್ಥಿಗಳಿಂದ ಹಣತೆ ಬೆಳಗಿಸುವ ಮೂಲಕ ಅಕ್ಷರ ದೀಪದ ಪ್ರಜ್ವಲನೆ, ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಅಕ್ಷರಾಭ್ಯಾಸ, ಪುಸ್ತಕ ವಿತರಣೆ, ವಿಶೇಷ ವಿದ್ಯಾರ್ಥಿ ದೀಕ್ಷಿತ್‍ಗೆ ಸಮ್ಮಾನ ಹೀಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಅಕ್ಷರ ಹಬ್ಬ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ಬೆಳಗ್ಗೆ ವಾದ್ಯ-ಬ್ಯಾಂಡ್‍ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ಕೆದ್ದಳಿಕೆ ಅಂಗನವಾಡಿ ಕೇಂದ್ರದ ಬಳಿಯಿಂದ ನೂತನವಾಗಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಕಾರಂತ ಅವರು ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸುವ ಮೂಲಕ ಅಕ್ಷರ ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶಾಲಾ ಕಾರ್ಯಕ್ರಮವನ್ನು ಊರಿನ ಉತ್ಸವವಾಗಿ ಆಚರಿಸುವ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುವ ಇಲ್ಲಿನ ಕಾರ್ಯಕ್ರಮ ಇತರೆಡೆಗಳಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗುವ ಮೂಲಕ ಸದೃಢ ದೇಶವನ್ನು ಕಟ್ಟುವಂತಾಗಬೇಕು ಎಂದು ಹೇಳಿದರು.
ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು, ಹೂ ಚೆಲ್ಲಿ ಸ್ವಾಗತಿಸಿದರು. ಬಳಿಕ ಹೊಸ ಮಕ್ಕಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ನೂತನವಾಗಿ ಸರಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿದ ಪೋಷಕರಿಗೂ ಹೂ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು. ಬಂಟ್ವಾಳ ಕ್ಷೇತ್ರಶಿಕ್ಷಣಾ„ಕಾರಿ ಶೇಷಶಯನ ಕಾರಿಂಜ ಅವರು ಹೊರೆಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದರು.
ಈ ವೇಳೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನ ಪುಸ್ತಕಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಪದ್ಮಶೇಖರ ಜೈನ್, ಬಂಟ್ವಾಳ ಕ್ಷೇತ್ರ ಸಮನ್ವಯಾ„ಕಾರಿ ರಾಜೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಯಾಕೂಬ್ ಸಾಹೇಬ್, ಶಿಕ್ಷಣ ಸಂಯೋಜಕಿ ಸುಜಾತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಂಗಾಧರ್. ನಿವೃತ್ತ ತಹಶೀಲ್ದಾರ್ ಲೋಕೇಶ್. ಧ.ಗ್ರಾ.ಯೋಜನೆ ಮೇಲ್ವಿಚಾರಕಿ ಭವಾನಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ , ಶಿಕ್ಷಕ ವೃಂದ , ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಅವರು ಸ್ವಾಗತಿಸಿದರು. ಶಿಕ್ಷಕ ಸಹಸ್ರನಾಮ ವಂದಿಸಿದರು. ಶಿಕ್ಷಕ ಚಂದಪ್ಪ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *