ಬಂಟ್ವಾಳ: ರಸ್ತೆ ಕ್ರಾಸಿಂಗ್ ವಿಚಾರಕ್ಕೆ ಸಂಬಂಧಿಸಿ ಕೆಎಸ್ಆರ್ಟಿಸಿ ಬಸ್ ಚಾಲಕ ಸೇರಿದಂತೆ ನೌಕರರ ತಂಡ ಕಾರುಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡು ಕೈಕಂಬ ಸಮೀಪದ ಪೊನ್ನೋಡಿಯ ಕೆಎಸ್ಆರ್ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಅಝೀಝ್ ಹಲ್ಲೆಗೊಳಗಾದವರು. ಘಟನೆಗೆ ಪ್ರತಿಯಾಗಿ ಸ್ಥಳೀಯ ಯುವಕರ ತಂಡ ಡಿಪೋಗೆ ನುಗ್ಗಿ ಕೆಎಸ್ ಆರ್ಟಿಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಹಲ್ಲೆಗೆ ಮುಂದಾದ ಘಟನೆಯೂ ನಡೆದಿದ್ದರಿಂದ ಪರಿಸರದಲ್ಲಿ ಕೆಲಹೊತ್ತುಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.


ಘಟನೆ ವಿವರ;
ಸ್ಥಳೀಯ ನಿವಾಸಿ ಅಝೀಝ್ ಎಂಬವರು ಕೈಕಂಬದಿಂದ ತೆರಳಿದವರು ಮರಳಿ ಕೈಕಂಬಕ್ಕೆ ಬರಲೆಂದು ಡಿಪೋ ಮುಂದಿನ ಡಿವೈಡರ್ ಕ್ರಾಸಿಂಗ್ ಬಳಿ ಕಾರು ತಿರುಗಿಸುತ್ತಿದ್ದಾಗ, ಅದೇ ಮಾರ್ಗದಲ್ಲಿ ಬಂದ ಕೆಎಸ್ ಆರ್ಟಿಸಿ ಬಸ್ಸನ್ನು ಅದರ ಚಾಲಕ ಡಿಪೋಗೆ ತೆರಳಲೆಂದು ರಸ್ತೆಯ ಎಡಭಾಗಕ್ಕೆ ತಿರುಗಿಸಿದ್ದರು. ಇದೇ ವೇಳೆ ಈರ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಬಸ್ಸಿನಿಂದಿಳಿದ ಚಾಲಕ ಕಾರುಚಾಲಕನಿಗೆ ಅವಾಚ್ಯಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಆಗ ಡಿಪೋದಲ್ಲಿದ್ದ ಕೆಲ ನೌಕರರೂ ಘಟನಾ ಸ್ಥಳಕ್ಕೆ ಬಂದು ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸುದ್ದಿ ತಿಳಿದ ಸ್ಥಳೀಯ ಯುವಕರ ತಂಡ ಡಿಪೋಗೆ ಧಾವಿಸಿ ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಮಾಹಿತಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗುಂಪು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ, ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಸ್ಥಳದಲ್ಲಿದ್ದು ಬಂದೋಬಸ್ತ್ ಒದಗಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿ.ಸಿ.ರೋಡು ಬಸ್ ನಿಲ್ದಾಣ, ಶಾಂತಿಯಂಗಡಿ, ಕೈಕಂಬ ದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಡಿಪೋ ನೌಕರರ ವಿರುದ್ದ ಆಕ್ರೋಶ.
ಕೆಎಸ್ಆರ್ಟಿಸಿ ಡಿಪೋ ದ ನೌಕರರು ರಾತ್ರಿ ಹೊತ್ತು ಮದ್ಯ ಸೇವಿಸಿ, ಅನುಚಿತವಾಗಿ ವರ್ತಿಸುತ್ತಾರೆ.ಪ್ರತಿನಿತ್ಯ ಇಲ್ಲಿನ ಕೆಲ ನೌಕರರ ಈ ವರ್ತನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪುರಸಭಾ ಸದಸ್ಯ ಮಹಮ್ಮದ್ ಶರೀಫ್ ಆರೋಪಿಸಿದ್ದಾರೆ. ಸ್ಥಳೀಯ ವಾಹನ ಚಾಲಕರೊಂದಿಗೆ ದರ್ಪದಿಂದ ವರ್ತಿಸುವ ನೌಕರರ ವಿರುದ್ದ ಕೆಎಸ್ ಆರ್ಟಿಸಿ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆರೋಪಿಸಿದ್ದಾರೆ.
