ಬಂಟ್ವಾಳ:”ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸಿದ್ಧಕಟ್ಟೆ-ಕರ್ಪೆ ರಸ್ತೆ ಡಾಂಬರೀಕರಣಗೊಂಡು 25 ವರ್ಷ ಪೂರೈಸುವ ಮೂಲಕ ‘ಬೆಳ್ಳಿಹಬ್ಬ’ ಆಚರಿಸುವ ಹಂತಕ್ಕೆ ಬಂದಿದೆ. ಈ ರಸ್ತೆ ದುಸ್ತಿತಿ ಬಗ್ಗೆ ವಿವಿಧ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಆರಂಭಿಸಿ 10 ವರ್ಷ ಪೂರೈಸಿ ‘ದಶಮಾನೋತ್ಸವ’ ಹಂತದಲ್ಲಿದೆ. ಇದರಿಂದಾಗಿ ಭರವಸೆ ಮಾತುಗಳನ್ನು ನಂಬುವ ಕಾಲ ಮುಗಿದು ಹೋಗಿದೆ. ರಾಜಕೀಯ ಪಕ್ಷಗಳಿಗೆ ಕೇವಲ ಓಟು ಮಾತ್ರ ಪ್ರಧಾನವಾಗಿದ್ದು, ಜನರ ಕಷ್ಟ ನಿಜಕ್ಕೂ ಬೇಕಾಗಿಲ್ಲ. ನಮಗೆ ನಮ್ಮ ಊರಿನ ರಸ್ತೆಯೇ ಪ್ರಧಾನ. ಇಲ್ಲಿನ ರಸ್ತೆ ದುಸ್ತಿತಿ ಹೀಗಿದ್ದರೂ ನಾವು ಮತ ನೀಡಬೇಕೇ…? ಈ ರಸ್ತೆ ದುರಸ್ತಿ ಆಗುವವರೆಗೆ ನಾವು ಯಾರಿಗೂ ಮತ ನೀಡುವುದಿಲ್ಲ.” ಹೀಗೊಂದು ವಿಶಿಷ್ಟ ಒಕ್ಕಣೆ ಸಹಿತ ಬರಹ ಹೊಂದಿರುವ ಎಚ್ಚರಿಕೆ ಬ್ಯಾನರ್ ಸಿದ್ಧಕಟ್ಟೆ ಸಮೀಪದ ಕರ್ಪೆ ರಸ್ತೆಯಲ್ಲಿ ಬುಧವಾರ ಸಂಜೆ ಕಂಡು ಬಂದಿದೆ.


ಇಲ್ಲಿನ ಸಿದ್ಧಕಟ್ಟೆಯಿಂದ ಕರ್ಪೆಗೆ ಕೇವಲ ಆರು ಕಿ.ಮೀ.ಉದ್ದದ ರಸ್ತೆಯನ್ನು ಈತನಕ ದುರಸ್ತಿ ಅಥವಾ ಮರು ಡಾಂಬರೀಕರಣ ಮಾಡಲು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಂದಲೂ ಸಾಧ್ಯವಾಗಿಲ್ಲ ಎಂಬುದು ಸ್ಥಳೀಯ ನಾಗರಿಕರು ಆಕ್ರೋಶಕ್ಕೆ ಕಾರಣವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳಿಗೂ ನಿದ್ದೆಗೆಡಿಸಿದೆ.
ಕಳೆದ 1990ರಲ್ಲಿ ಡಾಂಬರೀಕರಣಗೊಂಡ ಈ ರಸ್ತೆ ಬಳಿಕ ನೆಕ್ಕರೆಗುಳಿ ಮೂಲಕ ಅರಳ -ಅಣ್ಣಳಿಕೆ ಸಂಪರ್ಕ ರಸ್ತೆಯಾಗಿ 11 ಕಿ.ಮೀ. ಉದ್ದಕ್ಕೆ ವಿಸ್ತರಣೆಗೊಂಡಿದೆ. ಇನ್ನೊಂದೆಡೆ ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಮಾಡಮೆ-ಕಲ್ಕುರಿ ಎಂಬ ರಸ್ತೆಗೂ ಸಂಪರ್ಕ ಒದಗಿಸಿದೆ.
ಇದರಿಂದಾಗಿ ಈ ರಸ್ತೆಗೆ ಮೂರು ಖಾಸಗಿ ಬಸ್ ಓಡಾಡಲು ಉಳ್ಳವರಿಗೆ ಪರವಾನಿಗೆ ದೊರಕಿಸಿ ಕೊಡುವ ಮೂಲಕ ರಾಜಕಾರಣಿಗಳು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ ಎಂಬ ಆರೋಪವೂ ನಾಗರಿಕರಿಂದ ಕೇಳಿ ಬಂದಿದೆ.
ಸಿದ್ಧಕಟ್ಟೆ-ಕರ್ಪೆ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ, ಸಾಕಷ್ಟು ಬಾರಿ ಇಲ್ಲಿನ ರಿಕ್ಷಾ ಚಾಲಕ-ಮಾಲೀಕರ ಸಂಘ ಸಹಿತ ಸ್ಥಳೀಯರು ಶ್ರಮದಾನ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಈ ರಸ್ತೆ ಸಂಚಾರ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಕಳೆದ ವರ್ಷ ಮತ್ತೆ ಸಿದ್ಧಕಟ್ಟೆ-ಕರ್ಪೆ ಮತ್ತು ಸಿದ್ಧಕಟ್ಟೆ-ಮೂಡುಬಿದ್ರೆ ರಸ್ತೆತಡೆ ಪ್ರತಿಭಟನೆ ಮೂಲಕ ಎಚ್ಚರಿಸಿದ್ದರೂ ರಾಜಕಾರಣಿಗಳಿಂದ ಕೇವಲ ಭರವಸೆ ಹೊರತುಪಡಿಸಿ, ಉಳಿದಂತೆ ಯಾವುದೇ ರೀತಿಯ ಸ್ಪಂದನೆ ಅಥವಾ ಪ್ರಯೋಜನವಾಗಿಲ್ಲ. ಇದರಿಂದಾಗಿ ಇಲ್ಲಿನ ನೂರಾರು ಮನೆಗಳು ಸಹಿತ ಅಂಗನವಾಡಿ ಕೇಂದ್ರ, ಸಕರ್ಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಪ್ರತಿದಿನ ಸಂಚರಿಸುವ ಅಪಾರ ಮಂದಿ ಬೇಸಿಗೆಯಲ್ಲಿ ಧೂಳು, ಮಳೆಯಲ್ಲಿ ಕೆಸರು ಹೀಗೆ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಕಡ್ಡಾಯ ಮತದಾನಕ್ಕೆ ಮುಂದಾಗುವ ಸರ್ಕಾರ ಕಡ್ಡಾಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕೂಡಾ ಆಸಕ್ತಿ ತೋರಬೇಕು ಎಂಬ ಆಗ್ರಹ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.
