ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಈ ಬಾರಿ ಒಟ್ಟು 12 ಹೊಸ ಗ್ರಾಮ ಪಂಚಾಯಿತಿ ಅಸ್ತಿತ್ವಗೊಂಡಿದ್ದು ಈ ಹೊಸ ಪಂಚಾಯಿತಿಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿ ಭಾರೀ ಕಸರತ್ತು ನಡೆಸಿದೆ. ಇಲ್ಲಿನ ಒಟ್ಟು 57 ಗ್ರಾಮ ಪಂಚಾಯಿತಿನಲ್ಲಿ ಒಟ್ಟು 803 ಸ್ಥಾನಗಳಿಗೆ ಇದೇ 29ರಂದು ಚುನಾವಣೆ ನಡೆಯಲಿದೆ.
images
ಇನ್ನೊಂದೆಡೆ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕೂಡಾ 25ಕ್ಕೂ ಮಿಕ್ಕಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ತಾಲ್ಲೂಕಿನ ಅಮ್ಮುಂಜೆ ,ಕಳ್ಳಿಗೆ, ಪೆರಾಜೆ, ಸಜಿಪಪಡು, ಸಾಲೆತ್ತೂರು, ಬರಿಮಾರು, ಮಣಿನಾಲ್ಕೂರು , ಮಾಣಿಲ, ಮೂಡುಪಡುಕೋಡಿ, ಬೋಳಂತೂರು, ನೆಟ್ಲಮುಡ್ನೂರು, ಅರಳ ಹೀಗೆ ಹೊಸ ಗ್ರಾಮ ಪಂಚಾಯಿತಿ ರೂಪುಗೊಂಡಿದ್ದು, ಪಂಚಾಯಿತಿ ಕಾರ್ಯಾಲಯ ಆರಂಭಿಸಲು ಮಾತ್ರ ಸರ್ಕಾರಿ ಜಮೀನು, ಕಟ್ಟಡ ಹುಡುಕುವ ಕೆಲಸ ಇನ್ನೂ ಮುಗಿದಿಲ್ಲ.
ತಾಲ್ಲೂಕಿನ ವಿಟ್ಲ ಗ್ರಾಮ ಪಂಚಾಯಿತಿ ಮೇಲ್ದರ್ಜೆ ಗೇರಿದ್ದು, ಪುದು ಗ್ರಾಮ ಪಂಚಾಯಿತಿ ಅವಧಿ ಪೂರ್ಣಗೊಳ್ಳದ ಪರಿಣಾಮ ಚುನಾವಣೆ ನಡೆಯುತ್ತಿಲ್ಲ. ಇದರಿಂದಾಗಿ ತಾಲ್ಲೂಕಿನ 59 ಗ್ರಾಮ ಪಂಚಾಯಿತಿ ಪೈಕಿ ಕೇವಲ 57 ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯುತ್ತಿದೆ.
ಒಟ್ಟು 12,51,439 ಮಂದಿ ಮತದಾರರ ಪೈಕಿ 1,26,108 ಮಂದಿ ಪುರುಷರು ಮತ್ತು 1,25,331 ಮಂದಿ ಮಹಿಳಾ ಮತದಾರರಿದ್ದಾರೆ.
ಆರಂಭದಲ್ಲಿ ಒಟ್ಟು 2,567 ಮಂದಿ ನಾಮಪತ್ರ ಸಲ್ಲಿಸಿದ್ದು, 16 ಮಂದಿ ನಾಮಪತ್ರ ತಿರಸ್ಕೃತಗೊಂಡಿತ್ತು. ಆ ಬಳಿಕ ಒಟ್ಟು 709 ಮಂದಿ ನಾಮಪತ್ರ ಹಿಂತೆಗೆದುಕೊಂಡ ಪರಿಣಾಮ ಒಟ್ಟು 33 ಮಂದಿ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಸ್ಪಧರ್ಿಸುತ್ತಿರುವ ಅಭ್ಯರ್ಥಿಗಳಿಗೆ ಈಗಾಗಲೇ ವಿವಿಧ ಚಿಹ್ನೆಗಳನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿ ಪರಮೇಶ್ವರ ನಾಯ್ಕ್ ತಿಳಿಸಿದ್ದಾರೆ.
ಇದರಿಂದಾಗಿ ಒಟ್ಟು 916 ಸ್ಥಾನಗಳ ಬದಲಿಗೆ ಒಟ್ಟು 803 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಈ ಬಾರಿ ಮಹಿಳಾ ಮೀಸಲಾತಿಯಡಿ ಹೆಚ್ಚುವರಿ ಸ್ಥಾನಗಳಿಗೆ ಸಮರ್ಥ ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆಗೊಳಿಸುವಲ್ಲಿ ವಿವಿಧ ರಾಜಕೀಯ ಪಕ್ಷಗಳು ಹೈರಾಣಾಗಿರುವುದು ಕಂಡು ಬಂದಿದೆ.
ತಾಲ್ಲೂಕಿನ ನೆಟ್ಲಮುಡ್ನೂರು ಹೊಸ ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಥಳೀಯ ಪತ್ರಕರ್ತರೊಬ್ಬರನ್ನು ಕಣಕ್ಕಿಳಿಸಿದ್ದರೆ, ಅರಳ ಹೊಸ ಪಂಚಾಯಿತಿನಲ್ಲಿ ಈ ಹಿಂದೆ ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿದ್ದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾಂಗ್ರೆಸ್ ಬೆಂಬಲದಲ್ಲಿ ಅವಿರೋಧ ಆಯ್ಕೆಗೊಂಡು ಕಾಂಗ್ರೆಸ್ಗೆ ವಲಸೆ ಹೋದ ಘಟನೆಯೂ ನಡೆದಿದೆ.
ನೀರಿನ ಸಮಸ್ಯೆ:
ತಾಲ್ಲೂಕಿನಲ್ಲಿ ಈಗಾಗಲೇ ಅನಿರೀಕ್ಷಿತ ಮಳೆಯಾಗಿದ್ದರೂ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಭ್ಯರ್ಥಿಗಳಿಗೆ ಮತಯಾಚನೆಗೆ ಅಡ್ಡಿಯಾಗಿದ್ದು, ಕೆಲವೆಡೆ ಎರಡು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಚುನಾವಣೆ ಹಿನ್ನೆಲೆಯಲ್ಲಿ ದಿನಕ್ಕೆರಡು ಬಾರಿ ಪೂರೈಕೆಯಾಗುತ್ತಿದೆ ಎಂಬ ಅಭಿಪ್ರಾಯವೂ ಮತದಾರರಿಂದ ಕೇಳಿ ಬಂದಿದೆ.
25ರಂದು ತರಬೇತಿ:
ತಾಲ್ಲೂಕಿನಲ್ಲಿ ಈಗಾಗಲೇ ಒಟ್ಟು 1,700ಕ್ಕೂ ಮಿಕ್ಕಿ ಮಂದಿ ಚುನಾವಣಾ ಸಿಬ್ಬಂದಿಗಳಿಗೆ ಇದೇ 25ರಂದು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. –
ಮೋಹನ್ ಕೆ.ಶ್ರೀಯಾನ್

By Suddi9

Leave a Reply

Your email address will not be published. Required fields are marked *