ಮೂಡುಬಿದರೆ: ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಮೂಡುಮಾರ್ನಾಡಿನಲ್ಲಿ ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ದಾರಿ ನಿರ್ಮಿಸಿದ 9 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂಡುಮಾರ್ನಾಡು ಗ್ರಾಮದ ಕಂದೆಹೌಸ್ ಎಂಬಲ್ಲಿ ಕೊರಗ ಶೆಟ್ಟಿ ಎಂಬವರ 0.40 ಎಕ್ರೆ ಜಮೀನು ಇದ್ದು ಈ ಜಮೀನಿನ ಮೂಲಕ ಸದಾಶಿವ ಪೂಜಾರಿ ಎಂಬವರ ಜಮೀನಿಗೆ ಹೋಗಲು ಇರುವ ದಾರಿಯನ್ನು ತಂಡವೊಂದು ಜೆಸಿಬಿ ಮೂಲಕ ಅಗಲು ಮಾಡಲು ಪ್ರಯತ್ನಿಸಿದಾಗ ಕೊರಗ ಶೆಟ್ಟಿ ಅದರ ವಿರುದ್ಧ ಮೂಡುಬಿದರೆ ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು.
ಇತ್ತೀಚೆಗೆ 9 ಮಂದಿ ಆರೋಪಿಗಳ ತಂಡ ಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ದೂರುದಾರ ಕೊರಗ ಶೆಟ್ಟಿ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ದಾರಿ ಅಗಲ ಮಾಡಿ ನಷ್ಟ ಉಂಟು ಮಾಡಿ ತಡೆಯಲು ಹೋದಾಗ ದೂರುದಾರರ ಮನೆಯವರಿಗೆ ಬೆದರಿಕೆಯೊಡ್ಡಿರುತ್ತಾರೆ ಎನ್ನಲಾಗಿದೆ. ಕೋರ್ಟ್ ನಿರ್ದೇಶನದಂತೆ ಮೂಡುಬಿದರೆ ಪೊಲೀಸರು ಆರೋಪಿಗಳಾದ ಸಂಜೀವ ಶೆಟ್ಟಿ, ಸದಾಶಿವ ಪೂಜಾರಿ, ಸುಮತಿ, ಶ್ರೀನಾಥ್ ಸುವರ್ಣ, ಸತೀಶ್ ಕರ್ಕೇರಾ, ಪ್ರಶಾಂತ್, ಗೋಪಾಲ, ಸುರೇಶ್ ಶೆಟ್ಟಿ ಮತ್ತು ಪ್ರಸನ್ನ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
