ಬಂಟ್ವಾಳ: ತಾಲೂಕಿನಾದ್ಯಂತ ಸೋಮವಾರ ಸಂಜೆ ಅಬ್ಬರದ ಸಿಡಿಲಿಗೆ ಪಾಣೆಮಂಗಳೂರಿನಲ್ಲಿ ಬಾಲಕನೋರ್ವ ಮೃತಪಟ್ಟರೆ, ಕಡೇಶ್ವಾಲ್ಯದಲ್ಲಿ ಯುವತಿಯೊಬ್ಬಳು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದೇ ವೇಳೆ ಅನಂತಾಡಿ, ನೆಟ್ಲ ಮುಡ್ನೂರಿನಲ್ಲಿ ತಲಾ ನಾಲ್ಕು ಮನೆಗಳಂತೆ ಒಟ್ಟು ಎಂಟು ಮನೆಗಳಿಗೆ ಹಾನಿಯುಂಟಾಗಿದೆ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರರ ಕಛೇರಿ ಮೂಲಗಳು ತಿಳಿಸಿವೆ.
ಪಾಣೆಮಂಗಳೂರು ಬಂಗ್ಲೆ ಗುಡ್ಡೆಯ ಇಸುಬು ಎಂಬವರ ಮಗ ಅಬೂಬಕರ್ ಸಿದ್ದೀಕ್(16) ಸಿಡಿಲು ಬಡಿದು ಮೃತಪಟ್ಟ ನತದೃಷ್ಟ ಬಾಲಕನಾಗಿದ್ದಾನೆ. ಕಡೇಶ್ವಾಲ್ಯ ಗ್ರಾಮದ ಕೆರೆಮೂಲೆ ನಿವಾಸಿ ಸುಶೀಲ ಎಂಬವರ ಪುತ್ರಿ ವನಿತಾ ಗಂಭೀರ ಗಾಯಗೊಂಡಿದ್ದು, ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಹಾಗೆಯೇ ಅನಂತಾಡಿ ಮತ್ತು ನೆಟ್ಲ ಮುಡ್ನೂರಿನ ಪರಿಸರದಲ್ಲೂ ಸಿಡಿಲಿನ ಅಬ್ಬರಕ್ಕೆ ತಲಾ ನಾಲ್ಕುಮನೆಗಳಂತೆ ಒಟ್ಟು ಎಂಟು ಮನೆಗಳಿಗೆ ಹಾನಿಯಾಗಿದ್ದು, ಇದರ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ.


ಸಂಜೆ ಸುಮಾರು 4.30 ರ ಹೊತ್ತಿಗೆ ತಾಲೂಕಿನಾದ್ಯಂತ ಅಬ್ಬರದ ಗುಡುಗು, ಮಿಂಚು ಹಾಗೂ ಧಾರಾಕಾರ ಮಳೆಯು ಸುರಿದಿದ್ದು. ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಮೃತ ಅಬೂಬಕರ್ ಸಿದ್ದೀಕ್ ತನ್ನ ಮನೆಯ ಪಕ್ಕದ ಮಾವಿನ ಮರದ ಅಡಿಯಲ್ಲಿ ನಿಂತಿದ್ದ ವೇಳೆ ಮರಕ್ಕೆ ಬಡಿದ ಸಿಡಿಲಿನಿಂದ ಗಂಭೀರ ಗಾಯಗೊಂಡಿದ್ದ, ತಕ್ಷಣ ಈತನನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೆ ಮೃತಪಟ್ಟಿದ್ದ. ಈತ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ . ಕಳೆದ ಎಪ್ರಿಲ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಈತ ನ ಪರೀಕ್ಷಾ ಫಲಿತಾಂಶ ಮಂಗಳವಾರ ಹೊರಬೀಳಲಿತ್ತು. ಈ ನಡುವೆಯೇ ಆತ ಸಿಡಿಲಿನ ರುದ್ರನರ್ತನಕ್ಕೆ ಬಲಿಯಾಗಿದ್ದಾನೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳಾ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮಕರಣಿಕ ಎ.ಪಿ.ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡುಗು ಮಿಂಚಿನಿಂದಾಗಿ ತಾಲೂಕಿನಾದ್ಯಂತ ವಿದ್ಯುತ್ ಕೂಡಾ ಕಡಿತಗೊಂಡಿದೆ.
ಮಳೆಯ ನಡುವೆ ಟ್ರಾಫಿಕ್ ಜಾಮ್..
ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ ಸೋಮವಾರವೂ ಮುಂದುವರಿದಿದೆ. ಮರಳು ಲಾರಿಗಳ ಆರ್ಭಟಕ್ಕೆ ದಿನನಿತ್ಯ ಬಿ.ಸಿ.ರೋಡ್ ಟ್ರಾಫಿಕ್ ಜಾಮ್ ನಿಂದ ತತ್ತರಿಸುತ್ತಿದ್ದು, ಜನಸಾಮಾನ್ಯರು ತೊಂದರೆಪಡುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಮರಳು ಲಾರಿ ಸಾಗಾಟಕ್ಕೆ ನಿಷೇಧ ಹೇರಬೇಕೆಂಬ ಬೇಡಿಕೆ ಹೆಚ್ಚುತ್ತಿದ್ದರೂ, ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಿಸಿದೆ. ಇದಕ್ಕೆ ಪೂರಕ ಎಂಬಂತೆ ಸೋಮವಾರ ರಾಮಲ್ ಕಟ್ಟೆ ಪರಿಸರದಲ್ಲಿ ಸ್ಥಳೀಯರು ಮರಳು ತುಂಬಿದ ಲಾರಿಗಳನ್ನು ತಡೆಹಿಡಿದುದರಿಂದ ಇಲ್ಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿ.ಸಿ.ರೋಡಿನಲ್ಲಿ ನೂತನ ರೈಲ್ವೇ ಕಿರು ಸೇತುವೆಯ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆ ನಿಮರ್ಾಣಕ್ಕೆ ಹಾಕಲಾದ ಮಣ್ಣಿನ ರಾಶಿ ಮಳೆಗೆ ಇಳಿದು , ರಸ್ತೆಗೆ ಆವರಿಸಿದ್ದರಿಂದ ಸಂಚಾರಕ್ಕೆ ಮತ್ತಷ್ಟು ತೊಡಕುಂಟಾಯಿತು. ಕಳೆದ ವಾರ ಬಿಜೆಪಿ ಮುಖಂಡರಿಬ್ಬರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸಿ ಸಮಸ್ಯೆಯನ್ನು ಖುದ್ದು ವಿವರಿಸಿದ್ದರಲ್ಲದೆ, ಈಗಿರುವ ವೃತ್ತವನ್ನು ತಕ್ಷಣ ಕಿರಿದು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ, ಸಮಸ್ಯೆ ಬಿಗಡಾಯಿಸಿದರೂ ಜಪ್ಪಯ್ಯ ಎನ್ನುತ್ತಿಲ್ಲ. ಇದೀಗ ಸೋಮವಾರ ಮಳೆಯಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಹೆದ್ದಾರಿ ಇಲಾಖೆ, ಜನಪ್ರತಿನಿಧಿ ಗಳು ಹಾಗೂ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ
