ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಸಮೀಪದ ಬಸವನಗುಡಿ ಎಂಬಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೊ ವಾಹನ ಉರುಳಿ ಬಿದ್ದು ಮೂವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಇಲ್ಲಿಗೆ ಸಮೀಪದ ಕಂಗಿತ್ತಿಲು ನಿವಾಸಿ ದಿವಾಕರ ಶೆಟ್ಟಿ ಎಂಬವರು ತನ್ನ ಅಕ್ಕನ ಮೂವರು ಮಕ್ಕಳ ಸಹಿತ ಸ್ಕಾರ್ಪಿಯೊ ವಾಹನ ಚಲಾಯಿಸಿಕೊಂಡು ಮಡಂತ್ಯಾರಿನಿಂದ ಪುಂಜಾಲಕಟ್ಟೆಗೆ ಬರುತ್ತಿದ್ದ ವೇಳೆ ಬಸವನಗುಡಿ ಎಂಬಲ್ಲಿ ಹಿಂಬದಿ ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ. ಇದರಿಂದಾಗಿ ಸ್ಕಾರ್ಪಿಯೋ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಇದೇ ವೇಳೆ ಸ್ಕಾರ್ಪಿಯೋ ವಾಹನದಲ್ಲಿ ಎಲ್ಲಾ ಬಾಗಿಲು ಮುಚ್ಚಿಕೊಂಡಿದ್ದ ಪರಿಣಾಮ ಸುಮಾರು 20 ನಿಮಿಷ ದಿವಾಕರ ಶೆಟ್ಟಿ ಮತ್ತು ಮೂವರು ಮಕ್ಕಳು ಬಂಧಿಯಾಗಿದ್ದರು. ಆ ಬಳಿಕ ಕಿಟಕಿ ಗಾಜು ಒಡೆದು ಹೊರಗೆ ಬಂದ ಅವರು ಒಳಗೆ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದ ಮೂವರು ಮಕ್ಕಳನ್ನು ಹೊರ ತೆಗೆದಿರುವುದಾಗಿ ಪುಂಜಾಲಕಟ್ಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಶಿರಾಡಿ ಘಾಟಿಯಲ್ಲಿ ಘನವಾಹನ ಸಂಚಾರ ನಿರ್ಬಂಧಿಸಿದ್ದರೂ ಅಕ್ರಮ ಮರಳು ಸಾಗಾಟದ ಟಿಪ್ಪರ್ ಮತ್ತು ಲಾರಿ ನಿರಾತಂಕವಾಗಿ ಓಡಾಟ ನಡೆಸುತ್ತಿರುವುದೇ ಇಂತಹ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
–
