ರೂ 41ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಸಂಕೀರ್ಣ: ಸಚಿವ ವಿ.ಶ್ರೀನಿವಾಸ ಪ್ರಸಾದ್
ಬಂಟ್ವಾಳ: ರಾಜ್ಯದ ಒಟ್ಟು 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಸಂಕೀರ್ಣ ನಿರ್ಮಾಣಗೊಂಡಿದ್ದು, ಮಂಗಳೂರಿನಲ್ಲಿಯೂ ರೂ 41ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾಧಿಕಾರಿಗಳ ಸಂಕೀರ್ಣ ನಿರ್ಮಿಸಲು ಶೀಘ್ರವೇ ಶಿಲಾನ್ಯಾಸ ನೆರವೇರಿಸುವುದಾಗಿ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಮಿನಿ ವಿಧಾನಸೌಧ’ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 178 ತಾಲ್ಲೂಕುಗಳ ಪೈಕಿ ಈಗಾಗಲೇ 128 ತಾಲ್ಲೂಕಿನಲ್ಲಿ ತಲಾ ರೂ 10ಲಕ್ಷ ವೆಚ್ಚದಲ್ಲಿ ‘ಮಿನಿ ವಿಧಾನಸೌಧ’ ನಿರ್ಮಾಣಗೊಂಡಿದ್ದು, ಒಂದೇ ಸೂರಿನಡಿ ಎಲ್ಲಾ ಇಲಾಖಾ ಕಚೇರಿ ಬಂದಾಗ ಮಾತ್ರ ಜನ ಸಾಮಾನ್ಯರ ಅಲೆದಾಟ ನಿಯಂತ್ರಿಸಬಹುದು ಎಂದರು. ಬಂಟ್ವಾಳ ತಾಲ್ಲೂಕಿಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.
ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಆಶಯದಂತೆ ರಾಷ್ಟ್ರ ರಾಜಕಾರಣದಿಂದ ಅನಿವಾರ್ಯವಾಗಿ ರಾಜ್ಯ ರಾಜಕಾರಣಕ್ಕೆ ಬಂದು ಕಂದಾಯ ಸಚಿವನಾಗಿ ಈ ಸ್ಥಾನಕ್ಕೆ ಗೌರವ ತುಂಬುವ ಕೆಲಸದಲ್ಲಿ ್ಲತೊಡಗಿದ್ದೇನೆ. ರಾಜ್ಯದ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಟ್ಟು 7 ಸಾವಿರಕ್ಕೂ ಮಿಕ್ಕಿ ‘ಕಂದಾಯ ಅದಾಲತ್’ ನಡೆಸಿ ಒಟ್ಟು 1.20ಲಕ್ಷ ಪಹಣಿಪತ್ರಗಳ ಪೈಕಿ 8 ಲಕ್ಷ ಪಹಣಿಪತ್ರ ತಿದ್ದುಪಡಿಗೊಳಿಸುವ ಮೂಲಕ ರೈತರಿಗೆ 14 ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆ ನಿವಾರಿಸಲಾಗಿದೆ. ಈಗಾಗಲೇ ಒಟ್ಟು 1,769 ಭೂಮಾಪಕರನ್ನು ನೇಮಕಗೊಳಿಸಲಾಗಿದ್ದು, ಮತ್ತೆ 728 ಮಂದಿ ನೇಮಕಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ‘ಪೋಡಿ ಅದಾಲತ್’ ಮೂಲಕ ಕಳೆದ 40 ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗಿದೆ. ವಾರ್ಷಿಕ ರೂ 2,800ಕೋಟಿ ಮೊತ್ತವನ್ನು ಮೀಸಲಿಟ್ಟು, ‘ಪಿಂಚಣಿ ಅದಾಲತ್’ ಮೂಲಕ ಜನಸಾಮಾನ್ಯರಿಗೆ ಸಾಮಾಜಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅವರು ವಿವರಿಸಿದರು.
ಇದೀಗ ಗ್ರಾಮೀಣ ಪ್ರದೇಶದಲ್ಲಿ 94ಸಿ ಮತ್ತು ನಗರ ಪ್ರದೇಶದಲ್ಲಿ 94ಸಿಸಿ ಮೂಲಕ ಮನೆಯಡಿ ಜಮೀನು ಸಕ್ರಮಗೊಳಿಸಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಮತ್ತೆ ಮೂರು ತಿಂಗಳು ವಿಸ್ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಡಿಕೆ ಕೊಳೆ ರೋಗಕ್ಕೀಡಾದ ರೈತರಿಗೆ ರೂ 19ಕೋಟಿ ಮೊತ್ತದ ಪರಿಹಾರಧನ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಶ್ವೇತಪತ್ರ:
ಈ ಹಿಂದಿನ ಬಿಜೆಪಿ -ಜೆಡಿಎಸ್ ಸರ್ಕಾರ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಮತ್ತು ಕೆಲವೊಂದು ಮಂತ್ರಿಗಳು ಜೈಲು ಸೇರಿರುವುದೇ ದೊಡ್ಡ ಸಾಧನೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ‘ಶ್ವೇತಪತ್ರ’ ಹೊರಡಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಅವರು ಹೇಳಿದರು.
ಹಕ್ಕುಪತ್ರ:
ಇದೇ ವೇಳೆ 94 ಸಿ ಯೋಜನೆಯಡಿ ಆಯ್ಕೆಗೊಂಡ ಒಟ್ಟು 815 ಮಂದಿ ಅರ್ಹ ಫಲಾನುಭವಿಗಳ ಪೈಕಿ ಸಾಂಕೇತಿಕ ಹಕ್ಕುಪತ್ರ ವಿತರಿಸಿದರು. ಪ್ರಾಕೃತಿಕ ವಿಕೋಪ ಮತ್ತು ಮುಖ್ಯಮಂತ್ರಿ ಪರಿಹಾರಧನ ಧನ ಚೆಕ್ಕ್ ವಿತರಿಸಿ, ನಿವೃತ್ತಿಗೊಳ್ಳಲಿರುವ ಕಂದಾಯ ನಿರೀಕ್ಷಕ ರೋಹಿನಾಥ್ ಇವರನ್ನು ಅಭಿನಂದಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ವಾಳ ಕ್ಷೇತ್ರದ ಜನತೆ ಋಣಭಾರ ಎಂದಿಗೂ ನನ್ನ ಮೇಲಿದೆ. ಈ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮತದಾರರಿಗೆ ಗೌರವ ತಂದು ಕೊಡುವುದಾಗಿ ತಿಳಿಸಿದರು.
ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪುರಸಭಾಧ್ಯಕ್ಷೆ ವಸಂತಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಯಾಸ್ಮಿನ್, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಮತಾ ಎಸ್.ಗಟ್ಟಿ, ತಾ.ಪಂ.ಸದಸ್ಯ ಮಾಧವ ಎಸ್.ಮಾವೆ, ಬಿ.ಪದ್ಮಶೇಖರ ಜೈನ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಕ್ ಕಾಂಗ್ರೆ ಸಮಿತಿ ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರರು ಇದ್ದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉಪವಿಭಾಗಾಧಿಕಾರಿ ಡಾ.ಅಶೋಕ್ ಡಿ.ಆರ್.ವಂದಿಸಿದರು. ರಂಗಕಲಾವಿದ ಮಂಜು ವಿಟ್ಲ ಮತ್ತು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.





