ಬಂಟ್ವಾಳ: ಕರ್ನಾಟಕ ರಾಜ್ಯದಾದ್ಯಂತ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತಮ್ಮ ಸರಕಾರ ರಾಜ್ಯದಲ್ಲಿನ ಎಲ್ಲಾ ವರ್ಗಗಳಿಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವುದರೊಂದಿಗೆ ಯಾವ ಯಾವ ಜಾತಿ ವರ್ಗಗಳು ಆರ್ಥಿಕವಾಗಿ ಹಿಂದುಳಿದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಹೊರಟಿರುವುದು ಸ್ವಾಗತಾರ್ಹವಾಗಿರುತ್ತದೆ. ಹಾಗೂ ಆರ್ಥಿಕವಾಗಿ ಹಿಂದುಳಿದ ವಿವಿಧ ಬ್ರಾಹ್ಮಣ ವರ್ಗ ಮತ್ತು ಸಾರಸ್ವತ ಪಂಗಡಗಳಿಗೂ ಸಹ ಮೀಸಲಾತಿ ಸೌಲಭ್ಯ ನೀಡಲು ಮುಖ್ಯಮಂತ್ರಿಗಳು ಚಿಂತನೆ ಮಾಡಲು ಹೊರಟಿರುವುದು ಅಭಿನಂದನೀಯ ವಿಷಯವಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಸಂಬಂಧಿಸಿದಂತೆ ವಿವಿಧ ಜಾತಿ ಮತ್ತು ಉಪಜಾತಿಗಳಲ್ಲಿ ಬರುವ ಬ್ರಾಹ್ಮಣ ಸಮಾಜವು ಪುರೋಹಿತ ವೃತ್ತಿ ಮತ್ತು ಇತರ ಧಾರ್ಮಿಕ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದು ಹಾಗೂ ಸಾರಸ್ವತ ಪಂಗಡದಲ್ಲಿ ಪ್ರಮುಖರಾದ ಗೌಡ ಸಾರಸ್ವತ ಬ್ರಾಹ್ಮಣ, ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದವರು ವೃತ್ತಿಯಲ್ಲಿ ವ್ಯಾಪಾರಸ್ಥರು ಮತ್ತು ಕೃಷಿ ಚಟುವಟಿಕೆಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಬ್ರಾಹ್ಮಣ ಎಂಬ ಹೆಸರಿನಿಂದಾಗಿ ಆರ್ಥಿಕವಾಗಿ ಸಬಲರು ಎಂದು ಸರಕಾರ ಮತ್ತು ಸಮಾಜ ಬಲವಾಗಿ ಮನಗಂಡಿದೆ. ಆದರೆ ಎರಡು ಜಾತಿ ಮತ್ತು ಪಂಗಡಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಕುಟುಂಬಗಳಿದ್ದು ಅನೇಕರು ಶ್ರೀಮಂತರಾಗಿದ್ದರೂ ಸಹ ಕೆಲ ಕುಟುಂಬಗಳು ಬಡತನದಿಂದ ಕೂಡಿವೆ. ಈ ಜಾತಿ ಪಂಗಡದವರಿಗೆ ಇಷ್ಟರವರೆಗೆ ಸರಕಾರ ಯಾವುದೇ ರೀತಿಯ ಸೌಲಭ್ಯ ನೀಡಿರುವುದಿಲ್ಲ. ಹಲವಾರು ಬಾರಿ ಕುಡಾಲ ದೇಶಸ್ಥ ಆದ್ಯ ಬ್ರಾಹ್ಮಣ ಸಮಾಜವನ್ನು ಹಿಂದುಳಿದ ಪಟ್ಟಿಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮಾಜದ ವತಿಯಿಂದ ಮನವಿ ಮಾಡಲಾಗಿದ್ದರೂ ಸಹ ಪ್ರಯೋಜನವಾಗಿರುವುದಿಲ್ಲ.
ರಾಜ್ಯದಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮವಾದ ನಂತರ ಬ್ರಾಹ್ಮಣ ಮತ್ತು ಸಾರಸ್ವತ ಬ್ರಾಹ್ಮಣ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ನಿಖರವಾದ ಪಟ್ಟಿಯು ಲಭ್ಯವಾಗಲಿದ್ದು ಕರಾವಳಿ ಜಿಲ್ಲೆಗಳಲ್ಲಿನ ಬ್ರಾಹ್ಮಣ(ಎಲ್ಲಾ ಉಪಜಾತಿಗಳು) ಗೌಡ ಸಾರಸ್ವತ ಬ್ರಾಹ್ಮಣ ಮತ್ತು ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಜಾತಿ ಸಮಾಜವನ್ನು ಆರ್ಥಿಕತೆಯ ಮಾನದಂಡ ಮೇರೆಗೆ ಮನಗಂಡು ಮೀಸಲಾತಿ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕೆಂದು ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಈ ಮೂಲಕ ವಿನಂತಿ.

By suddi9

Leave a Reply

Your email address will not be published. Required fields are marked *