ಆಡಂಬರ ವಿವಾಹ ತ್ಯಜಿಸಲು ಪೂಜಾರಿ ಕರೆ
ಬಂಟ್ವಾಳ: ರಾಜ ಮಹಾರಾಜರ ಕಾಲದಲ್ಲಿ ‘ಸ್ವಯಂವರ’ ಪದ್ದತಿ ಇದ್ದಂತೆ ಅರ್ಹ ವರನನ್ನು ಆಯ್ಕೆ ಮಾಡಲು ಪ್ರಸಕ್ತ ಸನ್ನಿವೇಶದಲ್ಲಿ ‘ವಧು-ವರಾನ್ವೇಷಣೆ ‘ಕಾರ್ಯಕ್ರಮ ಅಗತ್ಯವಾಗಿದೆ. ಮದುವೆ ಸಂದರ್ಭದಲ್ಲಿ ‘ಮೆಹಂದಿ’ ಕಾರ್ಯಕ್ರಮ ನೆಪದಲ್ಲಿ ‘ಪಾನಕೂಟ’ ಆಯೋಜಿಸುವ ಆಡಂಬರದ ವಿವಾಹಕ್ಕೆ ಕಡಿವಾಣ ಹಾಕುವ ಮೂಲಕ ಬಡಜನರನ್ನು ಗಮನದಲ್ಲಿರಿಸಿಕೊಂಡು ‘ಸರಳ ಮತ್ತು ಉಚಿತ ಸಾಮೂಹಿಕ ವಿವಾಹ’ಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಬೆಂಗಳೂರು ಬಿಲ್ಲವ ಎಸೋಸಿಯೇಶನ್ ವತಿಯಿಂದ ಬಿ.ಸಿ.ರೋಡ್‍ನ ಗಾಣದಪಡ್ಪುವಿನಲ್ಲಿ ಭಾನುವಾರ ನಡೆದ ‘ವಧು-ವರಾನ್ವೇಷಣೆ’ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾತನಾಡಿದರು.

ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ವಧು-ವರಾನ್ವೇಷಣೆ ಕಾರ್ಯಕ್ರಮ ಇಂದಿನ ಕಾಲಘಟ್ಟದಲ್ಲಿ ಸಿರಿವಂತರು ಮತ್ತು ಬಡವರಿಗೆ ಅನುಕೂಲಕರವಾಗುತ್ತದೆ ಎಂದರು. ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬದುಕಿನಲ್ಲಿ ತ್ಯಾಗವೇ ಯಶಸ್ವಿ ದಾಂಪತ್ಯ ಜೀವನದ ಗುಟ್ಟು. ಎರಡು ಕುಟುಂಬಗಳ ನಡುವೆ ಪ್ರತಿಷ್ಠೆಗೆ ಬದಲಾಗಿ ಸಾಮರಸ್ಯಕ್ಕಾಗಿ ಮದುವೆ ಕಾರ್ಯಕ್ರಮ ನಡೆಯಬೇಕು ಎಂದರು.
sಸಮಿತಿ ಸಂಚಾಲಕ ಬೇಬಿ ಕುಂದರ್, ಸಂಚಾಲಕಿ ಮಾಲತಿ ಎ. ಪೂಜಾರಿ, ಪ್ರಮುಖರಾದ ಭಾಸ್ಕರ್ ಸಿ.ಅಮೀನ್, ಕೆ. ಶಾರದಾ ಕೃಷ್ಣ, ಭಾಸ್ಕರ ಪೂಜಾರಿ, ರಾಜೇಶ್ ಕುಮಾರ್, ಕೆ.ಡಿ.ಪೂಜಾರಿ, ಬಿ.ಎಂ. ಉದಯ ಕುಮಾರ್, ಗಿರೀಶ್ ಪೂಜಾರಿ ಬಸ್ರ, ತಿಮ್ಮಪ್ಪ ಪೂಜಾರಿ, ರಾಜೇಶ್ ಸುವರ್ಣ ಮತ್ತಿತರ ಪದಾಧಿಕಾರಿಗಳು ಇದ್ದರು.
ಬೆಂಗಳೂರು ಸಂಘದ ಅಧ್ಯಕ್ಷ ಎಂ. ವೇದಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಸಮಿತಿ ಅಧ್ಯಕ್ಷೆ ಸುಶೀಲ ಚಂದ್ರಶೇಖರ್ ವಂದಿಸಿದರು. ಭಾರತಿ ಬೇಬಿ ಕುಂದರ್ ಮತ್ತು ಬಿ. ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
(ಬಾಕ್ಸ್‍ಗೆ ಬಳಸಬಹುದು)
ಒಟ್ಟು 150ಕ್ಕೂ ಮಿಕ್ಕಿ ಅರ್ಹ ಜೋಡಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಸಮಾಜದಲ್ಲಿ ಆರ್ಥಿಕ ಶಕ್ತಿ ಇದ್ದವರು ವರ್ಷಕ್ಕೆ ಒಂದು ಅಥವಾ ಎರಡು ಅರ್ಹ ಜೋಡಿಗೆ ಸಂಪೂರ್ಣ ಖರ್ಚು ಭರಿಸುವ ಮೂಲಕ ಉಚಿತ ವಿವಾಹ ಮಾಡಿದರೆ ಅದಕ್ಕಿಂತ ಮಿಗಿಲಾದ ಪುಣ್ಯ ಕಾರ್ಯ ಬೇರೊಂದಿಲ್ಲ. ಧರ್ಮಸ್ಥಳ ಕ್ಷೇತ್ರದಲ್ಲಿ ಪ್ರತೀವರ್ಷ ಡಾ. ಡಿ.ವೀರೇಂದ್ರ ಹೆಗ್ಗಡೆ ದೊಡ್ಡ ಮಟ್ಟದಲ್ಲಿ ಈ ಸೇವೆ ಮಾಡುತ್ತಿದ್ದಾರೆ.
