ಉಳ್ಳಾಲ:ಮೊಬೈಲ್ ಮತ್ತು ಸ್ಟೇಷನರಿ ಅಂಗಡಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ಬಬ್ಬುಕಟ್ಟೆಯ ಹೊಸಗದ್ದೆ ಎಂಬಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಭಾಸ್ಕರ್ ಎಂಬವರಿಗೆ ಸೇರಿದ ವಿನು ಸ್ಟೋರ್ಸ್ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಬಬ್ಬುಕಟ್ಟೆಯ ವಿಜಯಲಕ್ಷ್ಮೀ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಕಳೆದ ಒಂದು ವರ್ಷದಿಂದ ಅಂಗಡಿಯನ್ನು ನಡೆಸುತ್ತಿದ್ದರು. ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಶಟರಿನ ಕೆಳಗಡೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ಬೆಂಕಿ ರೆಫ್ರಿಜರೇಟರ್ಗೆ ತಗಲಿ ಅದು ಸಂಪೂರ್ಣ ನಾಶವಾಗಿದೆ. ಘಟನೆ ಶನಿವಾರ ಬೆಳಿಗ್ಗೆ ಭಾಸ್ಕರ್ ಅವರು ಅಂಗಡಿ ಬಾಗಿಲು ತೆರೆಯಲು ಮುಂದಾದಾಗ ಬೆಳಕಿಗೆ ಬಂದಿದೆ.


15 ದಿನಗಳ ಹಿಂದೆ ಕಳವು ನಡೆದಿತ್ತು : ವಿನು ಸ್ಟೋರ್ಸ್ ಅಂಗಡಿಗೆ 15 ದಿನಗಳ ಹಿಂದೆ ಕಳ್ಳರು ನುಗ್ಗಿ ಸುಮಾರು ರೂ.60,000 ನಗದು ಹಾಗೂ ರೂ.20 ಬೆಲೆಯುಳ್ಳ ಸಾಮಗ್ರಿಗಳನ್ನು ಕಳವುಗೈದಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ದೂರೂ ದಾಖಲಾಗಿತ್ತು.
ವ್ಯಾವಹಾರಿಕ ವೈಷಮ್ಯ : ಇಬ್ಬರು ಪಾಲುದಾರರಾಗಿ ಆರಂಭಿಸಿದ ಅಂಗಡಿಯನ್ನು ಕೆಲ ದಿನಗಳಿಂದ ಭಾಸ್ಕರ್ ಒಬ್ಬರೇ ನಡೆಸುತ್ತಾ ಬರುತ್ತಿದ್ದಾರೆ. ಪಾಲುದಾರಿಕೆಯಿಂದ ಬೇರ್ಪಟ್ಟ ಬಳಿಕ ಅಂಗಡಿಯಲ್ಲಿ ಒಂದೊಂದು ಘಟನೆಗಳು ನಡೆಯುತ್ತಿದೆ. ಅವರ ಮೇಲೆ ಸಂಶಯ ವ್ಯಕ್ತಪಡಿಸಿ ಭಾಸ್ಕರ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಫಾರೆನ್ಸಿಕ್ ವಿಭಾಗದವರು ಆಗಮಿಸಿ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ






