ಬಂಟ್ವಾಳ; ಬಿ.ಸಿ.ರೋಡಿನಲ್ಲಿರುವ ತಾಲೂಕು ಕಛೇರಿ ಸ್ಥಳದಲ್ಲಿ 10ಕೋಟಿ ರೂ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಹಿನ್ನೆಲೆಯಲ್ಲಿ , ಸದ್ರಿ ಸ್ಥಳದಲ್ಲಿ ಕಾರ್ಯಚರಿಸುತ್ತಿರುವ ತಾಲೂಕು ಕಛೇರಿ , ಸಬ್ರಿಜಿಸ್ಟ್ರಾರ್ ಕಛೇರಿ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಜಿಲ್ಲಾ ಉಸ್ತುವಾರಿಸಚಿವ ಬಿ.ರಮಾನಾಥ ರೈ ಸೂಚನೆಯಂತೆ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರೇ ಹೆಚ್ಚುವರಿ ಮುತುರ್ವಜಿ ವಹಿಸಿ, ಮಿನಿವಿಧಾನ ಸೌಧ ಕಾಮಗಾರಿ ಶೀಘ್ರ ಆರಂಭಿಸಬೇಕೆನ್ನುವ ಇರಾದೆಯಿಂದ ಬಿ.ಸಿ.ರೋಡು ಸಬ್ರಿಜಿಸ್ಟ್ರಾರ್ ಕಛೇರಿ ಪಕ್ಕದಲ್ಲೇ 11 ಲಕ್ಷ ರೂ ವೆಚ್ಚದಲ್ಲಿ ತಾತ್ಕಾಲಿಕ ಕಟ್ಟಡ ನಿರ್ಮಿಸಲಾಗಿದೆ..

ಆರಂಭದಲ್ಲಿ ಹೆದ್ದಾರಿ ಪಕ್ಕದ ಖಾಸಗಿ ಕಟ್ಟಡಕ್ಕೆ ತಾಲೂಕು ಕಛೇರಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅದು ಮಹಡಿ ಕಟ್ಟಡವಾದ್ದರಿಂದ ಸಾರ್ವಜನಿಕರ ಭೇಟಿಗೆ ಕಷ್ಟ ಸಾಧ್ಯವಾಗಬಹುದು ಎಂಬ ಕಾರಣಕ್ಕೆ, ಅದನ್ನು ಕೈಬಿಡಲಾಯಿತು. ಬಳಿಕ ಈಗಾಗಲೇ ಮುಚ್ಚಿರುವ ಚಿತ್ರಮಂದಿರದ ಕಟ್ಟಡಕ್ಕೆ ಸ್ಥಳಾಂತರಿಸಬಹುದು ಎಂಬ ಸಲಹೆ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಬಗ್ಗೆಯೂ ಪರಿಶೀಲನೆ ನಡೆಸಿದರು. ಆದರೆ ಸದ್ರಿಕಟ್ಟಡದ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಅದನ್ನೂ ಕೈಬಿಡಲಾಯಿತು. ಇತ್ತ ತಾತ್ಕಾಲಿಕ ಕಛೇರಿ ಕಟ್ಟಡದ ಶೋಧಕಾರ್ಯ ನಡೆಸುವ ಭರದಲ್ಲಿ ಮಿನಿವಿಧಾನಸೌಧ ಕಾಮಗಾರಿ ಇನ್ನೂ ವಿಳಂಬವಾಗುವ ಭಯದಲ್ಲಿ ಜಿಲ್ಲಾಧಿಕಾರಿಯವರೇ ಲೋಕೋಪಯೋಗಿ ಇಂಜಿನಿಯರ್ ಗಳಿಗೆ ಪ್ರತ್ಯೇಕ ತಾತ್ಕಾಲಿಕ ಕಟ್ಟಡ ನಿರ್ಮಿಸಲು ಸೂಚಿಸಿ. ಅದಕ್ಕೆ 11 ಲಕ್ಷ ಅನುದಾನವನ್ನೂ ಒದಗಿಸಿಕೊಟ್ಟಿದ್ದರು.
ಛಿಧ್ರವಾಯಿತು ತಾಲೂಕು ಕಛೇರಿ..
ಮಿನಿವಿಧಾನಸೌಧ ಕಾಮಗಾರಿ ಹಿನ್ನೆಲೆಯಲ್ಲಿ ತಾಲೂಖು ಕಛೇರಿಯನ್ನು ಸ್ಥಳಾಂತರಗೊಳಿಸಲಾಗಿದೆ. ಆದರೆ ಒಂದೇ ಕಡೆ ಸೂಕ್ತ ವ್ಯವಸ್ಥೆಯಾಗದ ಹಿನ್ನೆಲೆಯಲ್ಲಿ ಕಚೇರಿಯ ವಿವಿಧ ವಿಭಾಗಗಳಿಗೆ ಬೇರೆ ಬೇರೆ ಕಟ್ಟಡಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಂದಾಯ ಇಲಾಖೆ ತಹಶೀಲ್ದಾರರ ಕಚೇರಿಯನ್ನು ನೂತನಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಚುನಾವಣಾ ಶಾಖೆ ಹಾಗೂ ಆಹಾರ ಶಾಖೆಯನ್ನು ಹಳೆ ತಾ.ಪಂ.ಕಟ್ಟಡದ ಜಲಾನಯನ ಕಛೇರಿಗೆಸ್ಥಳಾಂತರ ಗೊಳ್ಳುತ್ತಿದೆ. ಖಜಾನಾಧಿಕಾರಿಯವರ ಕಛೇರಿಯನ್ನು ತಾಲೂಕು ಪಂಚಾಯತ್ ಕಟ್ಟಡದ ಮೊದಲಮಹಡಿಗೆ ಸ್ಥಳಾಂತರಿಸಲು ಸಿದ್ದತೆ ನಡೆಸಲಾಗಿದೆ. ಪಡಸಾಲೆಯನ್ನು ಸಾರ್ವಜನಿಕ ರಂಗಮಂದಿರಕ್ಕೆ ಸ್ಥಳಾಂತರಿಸಲಾಗಿದೆ.
ಹೀಗೆ ಒಂದೇ ಸೂರಿನಲ್ಲಿದ್ದ ತಾಲೂಕು ಕಛೇರಿ ಒಂದೇ ಸೂರು ಮಿನಿವಿಧಾನಸೌಧ ನಿರ್ಮಾಣದ ಹಿನ್ನೆಲೆಯಲ್ಲಿ ಛಿದ್ರವಾಗಿದೆ.
ಮಧ್ಯವರ್ತಿಗಳ ಭಯ..
ಈ ನಡುವೆ ಬಿ.ಸಿ.ರೋಡಿನ ತಾಲೂಕು ಕಛೇರಿ ಸುತ್ತಮುತ್ತ ಮಧ್ಯವರ್ತಿಗಳು , ದಲ್ಲಾಳಿಗಳ ಇಲ್ಲವೆಂದು ಹೇಳಲಾಗುತ್ತಿದ್ದರೂ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿತ್ತು. ತಹಶೀಲ್ದಾರ್ ಕಛೇರಿ ಹತ್ತಿರವಿದ್ದಾಗಲೂ ಸಾರ್ವಜನಿಕರನ್ನು ಸತಾಯಿಸುತ್ತಿದ್ದ, ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ದಲ್ಲಾಳಿಗಳ ಕಾಟ ಮುಂದಿನ ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುತ್ತಿದ್ದಾರೆ. ಸಾರ್ವಜನಿಕರಿಗೆ ಹೆಚ್ಚು ಹತ್ತಿರವಾಗಿರುವ ಕಂದಾಯ ಇಲಾಖೆ ಈಗ ಛಿದ್ರವಾಗಿ ಸಾರ್ವಜನಿಕರಿಗೆ ಸಂಕಷ್ಟ ತಾರದಿರಲಿ, ಮಿನಿವಿಧಾನ ಸೌಧದ ಕಾಮಗಾರಿ ಶೀಘ್ರ ಆರಂಭವಾಗಿ ಬೇಗ ಮುಗಿಯಲಿ ಎಂಬುದೇ ಬಂಟ್ವಾಳ ಜನತೆ ಆಶಯ..
