ಮೂಡುಬಿದರೆ: ಬನ್ನಡ್ಕದ ಎಸ್.ಕೆ.ಎಫ್ ಸಂಸ್ಥೆಯು ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದ್ದು, 2014ನೇ ಸಾಲಿನ ಎಸ್.ಕೆ.ಎಫ್ ಪ್ರಶಸ್ತಿ ಪ್ರದಾನ ಸಮಾರಂಭ ಏ.19ರಂದು ಸಂಜೆ 4 ಗಂಟೆಗೆ ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಫ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.
ಮೋಹನ ಆಳ್ವ, ಕೃಷ್ಣ, ಸುರೇಶ್ ಆಚಾರ್, ಮುರುಗಸೆಲ್ವಂ, ರಾಬ್ಯುಲ್ ಹಾಕ್ಯೂಗೆ ಪ್ರಶಸ್ತಿ
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಲ್ಪಿ ಕೆ. ಸುರೇಶ್ ಆಚಾರ್ ಹೊಸಪೇಟೆ, ಸಮಾಜ ಸೇವಕರಾದ ಕೃಷ್ಣ ಚನ್ನರಾಯಪಟ್ಟಣ, ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಚೆನ್ನೈನ ಡಾ.ಡಿ ಮುರುಗಸೆಲ್ವಂ ಡಿ.ಹಾನ್, ರೈಸ್ ಮಿಲ್ ಕಂಪನಿಯಲ್ಲಿ ಸಾಧನೆ ಮಾಡಿರುವ ಎಸ್.ಕೆ. ರಾಬ್ಯುಲ್ ಹಾಕ್ಯೂ ಅವರಿಗೆ 25,000 ನಗದು ಸಹಿತ ಎಸ್ಕೆಎಫ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಸಂಸದ ವೀರಪ್ಪ ಮೊಯಿಲಿ, ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಸಮಯ 7-8.30ರವರೆಗೆ ಚಲನಚಿತ್ರ ಗಾಯಕರಿಂದ ಸಂಗೀತ ರಸಸಂಜೆ, 8-30ರಿಂದ 10ರ ತನಕ ಉಡುಪಿಯ ಭಾರ್ಗವಿ ಮತ್ತು ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ವೈವಿಧ್ಯ ನಡೆಯಲಿದೆ ಎಂದು ರಾಮಕೃಷ್ಣ ಅವರು ತಿಳಿಸಿದರು.
ಬೈಕಾಡಿ ಜನಾರ್ಧನ ಆಚಾರ್, ಡಾ.ಜಯಪ್ರಕಾಶ್ ಮಾವಿನಕುಳಿ, ಎಸ್.ಕೆ.ಎಫ್ ಕೈಗಾರಿಕ ಸಂಸ್ಥೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು
