ಬಂಟ್ವಾಳ: ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದಾಗ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ . ಕ್ರೈಸ್ತ ಶಿಕ್ಷಣಸಂಸ್ಥೆಗಳು ಸಮಾಜಕ್ಕೆ ಉನ್ನತ ಕೊಡುಗೆ ನೀಡಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಅವರು ಎ.13 ಸೋಮವಾರರಂದು ಜರಗಿದ ಬಂಟ್ವಾಳ ತಾಲೂಕು ಅಲ್ಲಿಪಾದೆ ಸಂತ ಜೋನ್ ಹಿ.ಪ್ರಾ.ಶಾಲಾ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸರಕಾರಗಳಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಎಲ್ಲಾ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ದೊರಕಿಸಿಕೊಡುವುದು ಪ್ರತಿಯೊಬ್ಬರ ಕರ್ತವ್ಯ ಎಂದ ಅವರು ಈ ಸಂದರ್ಭದಲ್ಲಿ ಶಾಲಾಭಿವೃದ್ಧಿಗೆ 5 ಲಕ್ಷ ರೂ. ಅನುದಾನ ಘೋಷಿಸಿದರು.
ಮಂಗಳೂರು ಧರ್ಮಾಧ್ಯಕ್ಷ ಎಲೋಸಿಯಸ್ ಪಾವ್ಲ್ ಡಿಸೋಜ ಅವರು ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಶೀವರ್ಚನ ನೀಡಿ ಮಾತನಾಡಿ ಕ್ರಿಸ್ತ ಧರ್ಮ ಸಂಸ್ಥೆ ಯಾವುದೇ ಆಸ್ತಿ ಪಾಸ್ತಿಗಳನ್ನು ಅಪೇಕ್ಷಿಸುವುದಿಲ್ಲ . ಬಡವರಿಗೆ ವಿದ್ಯೆ , ನಿರ್ಗತಿಕರಿಗೆ ಸೂರು ನೀಡುವಲ್ಲಿ ಅತಿ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಊರ ಪರವೂರ ದಾನಿಗಳ ಪರಿಶ್ರಮದಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿಮಾಣಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು 5 ಲಕ್ಷ ರೂ.ಅನುದಾನ ಘೋಷಿಸಿದರು.
ಈ ಸಂದರ್ಭದಲ್ಲಿ ಶಾಲೆಗೆ ಅತೀ ಹೆಚ್ಚು ದಾನ ನೀಡಿದ ಹಾಗೂ ಶ್ರಮಿಸಿದ ದಾನಿಗಳನ್ನು ಮತ್ತು 13 ವರ್ಷ ಸೇವೆ ಸಲ್ಲಿಸಿದ ಕಂಪ್ಯೂಟರ್ ಶಿಕ್ಷಕಿ ವಂದನ ರಾವ್, 23 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಐರಿನ್ ಅವರನ್ನು ಸಮ್ಮಾನಿಸಲಾಯಿತು.
ಮೊಡಂಕಾಪು ಧರ್ಮಗುರು ಮೆಕ್ಸಿಂ ನೊರೊನ್ಹಾ , ಮಂಗಳೂರು ಕೆಥೊಲಿಕ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೆರಾಲ್ಡ್ ಡಿಸೋಜ, ಅಗ್ರಾರ್ ಚರ್ಚ್ ಧರ್ಮಗುರು ಬೆಂಜಮಿನ್ ಪಿಂಟೊ, ಫ್ರೊವಿನ್ಸಿಯಲ್ ಕ್ಲೂನಿ ಭಗಿನಿ ಸಂಸ್ಥೆಯ ಸಿ|ನರ್ಸಿಜಾ ಸಿಕ್ವೇರಾ, ಸರಪಾಡಿ ಜಿ.ಪಂ.ಸದಸ್ಯೆ ಗಿರಿಜಾ ರಾಮ, ಬಂಟ್ವಾಳ ಕ್ಷೇತ್ರ ಶಿಕ್ಷಣಾ„ಕಾರಿ ಶೇಷಶಯನ ಕಾರಿಂಜ, ಸರಪಾಡಿ ತಾ.ಪಂ.ಸದಸ್ಯೆ ವಿಲಾಸಿನಿ ಶಾಂತವೀರ ಪೂಜಾರಿ, ಉಳಿ ತಾ.ಪಂ. ಸದಸ್ಯ ಸಂಪತ್ ಕುಮಾರ್ ಶೆಟ್ಟಿ , ಸರಪಾಡಿ ಗ್ರಾ.ಪಂ.ಅಧ್ಯಕ್ಷ ಧನಂಜಯ ಶೆಟ್ಟಿ , ನಾವೂರು ಗ್ರಾ.ಪಂ.ಅಧ್ಯಕ್ಷ ಬೇಬಿ ಸುವರ್ಣ, ಅಲ್ಲಿಪಾದೆ ಚರ್ಚ್ ಧರ್ಮಗುರು ಗ್ರೆಗರಿ ಪಿರೇರಾ, ಮುಖ್ಯಶಿಕ್ಷಕಿ ಸಿ|ದುಲ್ಸಿನ್ ಫೆರ್ನಾಂಡಿಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ , ಸಮಿತಿ ಸದಸ್ಯರು, ಪಾಲನಾ ಸಮಿತಿ ಉಪಾಧ್ಯಕ್ಷ ಲಿಯೋ ಫೆರ್ನಾಂಡಿಸ್, ಸಮಿತಿ ಸದಸ್ಯರು, ಶಾಲಾ ನಾಯಕಿ ಕು|ರಿಯಾ ಪಿಂಟೊ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
