ಬಂಟ್ವಾಳ :ತಾಲ್ಲೂಕಿನ ಕೊಯಿಲ ಗ್ರಾಮದ ಮಾವಂತೂರು ಎಂಬಲ್ಲಿ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿದ ಪರಿಣಾಮ ಇಲ್ಲಿನ ನಿವಾಸಿಗಳಿಬ್ಬರಿಗೆೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಇಲ್ಲಿನ ಮಾವಂತೂರು ನಿವಾಸಿ ಪದ್ಮರಾಜ ಬಲ್ಲಾಳ್ ಎಂಬವರು ಸರ್ವೆ ನಂಬ್ರ 87-1ಎ ಸರಕಾರಿ ಜಮೀನಿನಲ್ಲಿ ರಸ್ತೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳಾದ ಎಂ.ದೇವಪ್ಪ ಶೆಟ್ಟಿ ಮಾವಂತೂರು ಮತ್ತು ಅವರ ಅಳಿಯ ಸುಭಾಶ್ಚಚಂದ್ರ ಶೆಟ್ಟಿ ಎಂಬವರು ಕಳೆದ 20 ವರ್ಷಗಳ ಹಿಂದೆ ಬಂಟ್ವಾಳ ಸಿವಿಲ್ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದರು.
ಈ ದಾವೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಅಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದರೂ ಎಂ.ದೇವಪ್ಪ ಶೆಟ್ಟಿ ಮತ್ತು ಸುಭಾಶ್ಚಂದ್ರ ಶೆಟ್ಟಿ ಅವರು ರಸ್ತೆಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಎಂ.ಪದ್ಮರಾಜ ಬಲ್ಲಾಳ್ ಮತ್ತೆ ನ್ಯಾಯಾಲಯ ಮೆಟ್ಟಿಲೇರಿದ್ದರು.
ಈ ಬಗ್ಗೆ ನ್ಯಾಯಾಲಯವು, ಒಂದು ತಿಂಗಳೊಳಗೆ ರಸ್ತೆ ತಡೆ ತೆರವುಗೊಳಿಸದಿದ್ದಲ್ಲಿ ನ್ಯಾಯಾಲಯ ಆದೇಶ ಉಲ್ಲಂಘನೆಗಾಗಿ ಒಂದು ತಿಂಗಳು ಜೈಲುವಾಸ ಶಿಕ್ಷೆ ವಿಧಿಸುವುದಾಗಿ ಎಂ.ದೇವಪ್ಪ ಶೆಟ್ಟಿ ಮಾವಂತೂರು ಮತ್ತು ಅವರ ಅಳಿಯ ಸುಭಾಶ್ಚಚಂದ್ರ ಶೆಟ್ಟಿ ಇವರಿಗೆ ಎಚ್ಚರಿಕೆ ನೀಡಿದೆ ಎಂದು ವಕೀಲರಾದ ಕಜೆ ರಾಮಚಂದ್ರ ಭಟ್ ಮತ್ತು ಕಜೆ ನರಸಿಂಹ ಭಟ್ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
