ಹರ್ಯಾಣ: ತನ್ನ ಜೀವನದ ಗುರಿ ಸಾಧಿಸಲು ಹಾಗೂ ವಿದ್ಯಾಭ್ಯಾಸ ಪೂರೈಸಲು ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಹರ್ಯಾಣದ ಹುಡುಗಿ, ಬಾಕ್ಸರ್ ಅವರಿವರ ಮನೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಆಘಾತಕಾರಿ ಸುದ್ದಿ ಇದಾಗಿದೆ.
10ನೇ ತರಗತಿಯ ವಿದ್ಯಾರ್ಥಿನಿ ರಿಷು ಮಿತ್ತಲ್ ತನ್ನ ಒಬ್ಬ ಅಣ್ಣನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಣ್ಣ ಖೈತಾಲ್ ಜಿಲ್ಲೆಯ ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಿಗುವ ಹಣ ಅಷ್ಟಕಷ್ಟೇ ಇದೆ. ಹೀಗಾಗಿ ರಿಷು ಬೇರೆ, ಬೇರೆ ಮನೆಯ ಚಾಕರಿ ಮಾಡಿ ಬರುವ ಅಲ್ಪ, ಸ್ವಲ್ಪ ಹಣದಲ್ಲಿ ತನ್ನ ಸ್ಕೂಲ್ ಫೀಸ್ ಕಟ್ಟಲು ಬಳಸಿಕೊಳ್ಳುತ್ತಿದ್ದಾಳಂತೆ.

ನಾನು ಬೆಳಗ್ಗಿನ ಜಾವ 5 ಗಂಟೆಗೆ ಎದ್ದು ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡುತ್ತೇನೆ. ನಂತರ ಮನೆಗಳಲ್ಲಿ ಕೆಲಸ ಮಾಡಿ, ಶಾಲೆಗೆ ತೆರಳುತ್ತೇನೆ. ನನ್ನ ತರಗತಿ ಮುಗಿದ ಮೇಲೆ, ಮತ್ತೆ ಮನೆಗೆಲಸ, ಸಂಜೆ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡುವುದಾಗಿ ರಿಷು ತನ್ನ ದಿನಚರಿಯನ್ನು ವಿವರಿಸುತ್ತಾಳೆ.
ತನ್ನ ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡಿರುವ ರಿಷು ಕಷ್ಟಪಟ್ಟು ಜೀವನ ನಡೆಸುವ ಮೂಲಕ ತನ್ನ ಕನಸು ಈಡೇರಿಸಿಕೊಳ್ಳಲು ದಿನನಿತ್ಯ ಶ್ರಮಪಡುತ್ತಿದ್ದಾಳೆ. 46 ಕೆಜಿ ವಿಭಾಗದಲ್ಲಿ ಕಳೆದ ವರ್ಷ ಹರ್ಯಾಣ ಪ್ರತಿನಿಧಿಸಿ ಚಿನ್ನದ ಪದಕವನ್ನು ರಿಷು ಗೆದ್ದಿದ್ದಳು.
ರಿಷು ತುಂಬಾ ಬಡತನದಿಂದ ಬದುಕುತ್ತಿದ್ದಾಳೆ. ಆದರೆ ಅವಳಲ್ಲಿ ತುಂಬಾ ಟ್ಯಾಲೆಂಟ್ ಇದೆ. ಅವಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ. ಹಾಗಾಗಿ ಕೆಲವು ಎನ್ ಜಿಒ ಆಕೆಯನ್ನು ದತ್ತು ತೆಗೆದುಕೊಂಡು, ಆಕೆಯ ಕನಸನ್ನು ಈಡೇರಿಸಿದರೆ ತುಂಬಾ ಒಳ್ಳೆಯದು ಎಂದು ರಿಷು ಕೋಚ್ ರಾಜೇಂದರ್ ಸಾಂಧು ಮನವಿ ಮಾಡಿಕೊಂಡಿದ್ದಾರೆ.
