ಬಂಟ್ವಾಳ: ಕೊನೆಗೂ ಕಾಲ ಕೂಡಿ ಬಂದಿತ್ತಾ , ಅರ್ದದಲ್ಲಿ ನಿಂತ ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕಾ ಸ್ಥಾಪನೆಗೆ ಚಾಲನೆ ದೊರಕಿತಾ, ಜನರ ಬಹುದಿನದ ಕನಸು ನನಸಾದೀತಾ, ಜಿಲ್ಲಾಧಿಕಾರಿ ಕಾಮಗಾರಿಗೆ ರೈಟ್ ಎನ್ನುತ್ತಾರಾ? ಬಂಟ್ವಾಳದ ಕಸ ಕಂಚಿಡ್ಕಕ್ಕೆ ಹೋದೀತಾ , ನ್ಯಾಯಲಯದ ಆದೇಶಕ್ಕೆ ಬೆಲೆ ಸಿಕ್ಕೀತಾ, ಅಧಿಕಾರಿಗಳ ಮತ್ತು ಆಡಳಿತಕ್ಕೆ ಬೆಲೆ ಸಿಕ್ಕೀತಾ, ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಸಕ್ಕಾಗಿ ನಡೆಯುತ್ತಿದ್ದ ಕಾಲಹರಣಕ್ಕೆ ಮುಕ್ತಿ ಸಿಕ್ಕೀತಾ, ಮತ್ತೆ ಪ್ರತಿಭಟನೆ ನಡೆದೀತಾ, ಅಲ್ಲಿನ ಸಕ್ರಮ ಮನೆಗಳಿಗೆ ಬದಲಿ ವ್ಯವಸ್ಥೆ ಮಾಡಿಯಾರಾ, ಅಕ್ರಮ ಕಲ್ಲಿನ ಕೋರೆ ಮತ್ತು ಮನೆಯವರ ಮತ್ತೆ ಹೊರಾಟ ಮುಂದುವರಿದೀತಾ ಎನ್ನುವ ಪ್ರಶ್ನೆಗಳು ಇಂದು ಜಿಲ್ಲಾದಿಕಾರಿಯವರು ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳ ನಡುವೆ ನಡೆದ ಗುಪ್ತ ಸಭೆಯಲ್ಲಿ ಪೂರ್ಣವಿರಾಮ ಸಿಗಬಹುದೇ ಅಥವಾ ಮತ್ತೆ ಹಿಂದಿನ ಸ್ಥಿತಿಯೇ ಒದಗಬಹುದೇ ?

 

2-dc
ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭಾ ಸದಸ್ಯರ ಹಠಾತ್ ಸಭೆ ಸರ್ಕಾರಿ  ರಜಾ ದಿನವಾದ ಗುರುವಾರ ಅಪರಾಹ್ನ ಬಂಟ್ವಾಳದ ಪ್ರವಾಸಿ ಬಂಗಲೆಯಲ್ಲಿ ನಡೆದಿದೆ.
ಕಂಚಿನಡ್ಕ ಪದವಿನಲ್ಲಿ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರೇ ತೊಡಕಾಗಿದ್ದಾರೆ ಎನ್ನುವ ಆರೋಪವನ್ನು ಕಳೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರು ಮಾಡಿದ್ದು, ಸಭೆ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದರು. ಈ ಹಿಂದಿನ ನಾಲ್ಕೈದು ಸಭೆಗಳಲ್ಲೂ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಜಿಲ್ಲಾಧಿಕಾರಿಯ ವಿರುದ್ದ ಸದಸ್ಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದರೂ ಜಿಲ್ಲಾಧಿಕಾರಿ ಈ ಬಗ್ಗೆ ತಲೆಕೆಡಿಸಿ ಕೊಂಡಿರಲಿಲ್ಲ. ಇದೀಗ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಯ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸಮಸ್ಯೆಯನ್ನು ಬಿಡಿಸಿಟ್ಟ ಸದಸ್ಯರು:
ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಾಗಾರಿಗೆ ಇದ್ದಂತಹ ಕಾನೂನಾತ್ಮಕ ಅಡೆತಡೆಗಳು ನಿವಾರಣೆಯಾಗಿದೆ. ಹಾಗೆಯೇ ಪ್ರತೀ ವರ್ಷ ಸುಪ್ರಿಂ ಕೋರ್ಟ್ಗೆ ಪ್ರತೀ ವರ್ಷ ಕಾಮಾಗಾರಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಪುರಸಭೆಯಿಂದ ಸಲ್ಲಿಸಲಾಗುತ್ತಿದೆ. ಆದರೂ ಕಂಚಿನಡ್ಕ ಪದವಿನಲ್ಲಿ ನಡೆಯುತ್ತಿರುವ ಗಣಿ, ಭೂ ಮಾಪಿಯಾಕ್ಕೆ ಮಣಿದು ಜಿಲ್ಲಾಡಳಿತ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಹಿಂಜರಿಯುತ್ತಿದೆ ಇದೇ ನಿಲುವು ತೆಗೆದುಕೊಂಡರೆ ಮಂಗಳೂರು ಮಹಾನಗರ ಪಾಲಿಕೆಗೆ ತುಂಬೆಯಿಂದ ಪೂರೈಕೆಯಾಗುವ ಕುಡಿಯುವ ನೀರಿಗೂ ಅಡ್ಡಿ ಪಡಿಸುವುದಾಗಿ ಸದಸ್ಯ ಸದಾಶಿವ ಬಂಗೇರ ಜಿಲ್ಲಾಧಿಕಾರಿಯವರಿಗೆ ಎಚ್ಚರಿಸಿದರು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಿ.ಸಿ.ರೋಡಿನಿಂದಲೆ ಹಾದು ಹೋಗಬೇಕಾಗಿದ್ದು ಇಲ್ಲಿನ ತ್ಯಾಜ್ಯ ವಿಲೇವಾರಿ ಅಸಮರ್ಪಕತೆಯಿಂದ ಜನರು ಪುರಸಭೆಗೆ ಛೀ ಮಾರಿ ಹಾಕುವಂತಾಗಿದೆ. ಇದಕ್ಕೂ ಮೊದಲು ಅಧಿಕಾರಿ ಮಟ್ಟದ ಹಲವು ಸಭೆಗಳನ್ನು ನಡೆಸಲಾಗಿತ್ತಾದರೂ ಈ ಸಮಸ್ಯೆ ಇನ್ನೂ ಬಗೆ ಹರಿಯದಿರುವುದರಿಂದ ಪುರವಾಸಿಗಳು ಜನಪ್ರತಿನಿಧಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸದಾಶಿವ ಬಂಗೇರ ಸಚಿವರ ಹಾಗೂ ಜಿಲ್ಲಾಧಿಕಾರಿಯವರ ಗಮನ ಸೆಳೆದರು. ಸದಸ್ಯರಾದ ವಾಸು ಪೂಜಾರಿ ಹಾಗೂ ಮೊನೀಶ್ ಅಲಿ ಯವರು ಇದಕ್ಕೆ ಧ್ವನಿಗೂಡಿಸಿದರು.
ಜಿಲ್ಲಾಧಿಕಾರಿಗೆ ಬಿಸಿ ಮುಟ್ಟಿಸಿದ ಸಚಿವ ರೈ:
ಸದಸ್ಯರ ಆರೋಪಗಳ ಸುರಿಮಳೆಯಿಂದ ಕೆಂಡಾಮಂಡಲರಾದ ಸಚಿವ ರಮನಾಥ ರೈವರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ನಗರ ಕೋಶದ ಯೋಜನಾ ನಿರ್ದೇಶಕ ತಾಕತ್ತ್ ರಾವ್ ಹಾಗೂ ಸಹಾಯಕ ಎಂಜಿನಿಯರ್ ಶ್ರೀಧರ್ ಅವರನ್ನು ತೀವ್ರ ತರಾಟೆಗೆ ತೆಗದುಕೊಂಡರು. ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಎತ್ತಂಗಡಿಗೊಳಿಸುವ ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭ ಜವಬ್ದಾರಿಯಿಂದ ನುಣುಚಿಕೊಂಡ ಜಿಲ್ಲಾಧಿಕಾರಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಮೇಲೆ ಗೂಬೆ ಕೂರಿಸಲು ಯತ್ನಿಸಿದರು. ಅಂತಿಮವಾಗಿ ಮುಂದಿನ ಸೋಮವಾರ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿಯ ಅಲ್ಪಾವಧಿ ಟೆಂಡರಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವುದಾಗಿ ಜಿಲ್ಲಾಧಿಕಾರಿವರು ಸಚಿವರಿಗೆ ಭರವಸೆ ನೀಡಿದರು.
ಬಿಜೆಪಿ ಸದಸ್ಯರ ಗೈರು:
ಸಭೆಯ ಬಗ್ಗೆ ಬಿಜೆಪಿ ಸದಸ್ಯರಿಗೆ ಪುರಸಭೆಯಲ್ಲಿ ಜಿಲ್ಲಾದಿಕಾರಿಯವರ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗಿದೆ ಎಂದು ದೂರವಾಣಿಯ ಮೂಲಕ ತಿಳಿಸಲಾಗಿತ್ತು. ಅದರಂತೆ ಬಿಜೆಪಿ ಸದಸ್ಯರು ಪುರಸಭೆಯಲ್ಲಿ ಕಾದು ಕುಳಿತರು. ಆದರೆ ಸಭೆಯನ್ನು ದಿಢೀರನೇ ಪ್ರವಾಸಿ ಬಂಗಲೆಯಲ್ಲಿ ನಡೆಸಿದ್ದರಿಂದ ಬಿಜೆಪಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿದರು.
ಕಾಮಗಾರಿ ನಡೆಸಲು ಯಾವುದೇ ಅಡ್ಡಿಯಿಲ್ಲ: ಸಚಿವ ರೈ
ಪ್ರವಾಸಿ ಬಂಗಲೆಯಲ್ಲಿ ನಡೆದ ಸಭೆಗೆ ಮಾಧ್ಯಮದವರನ್ನು ದೂರ ಇಡಲಾಗಿತ್ತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಆರು ವರ್ಷಗಳ ಹಿಂದೆ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿ ಆರಂಭಗೊಂಡಿದ್ದು ಕೋಟ್ಯಾಂತರ ರುಪಾಯಿ ವ್ಯಯ ಮಾಡಲಾಗಿದೆ. ಸ್ಥಳೀಯರು ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಕಾಮಾಗಾರಿ ಸ್ಥಗಿತಗೊಂಡಿತ್ತು. ಈಗ ಘಟಕಕ್ಕೆ ಸಂಬಂಧಿಸಿ ಕಾನೂನು ತೊಡಕು ನಿವಾರಣೆಯಾಗಿದ್ದು ಶೀಘ್ರವೇ ಘಟಕದ ಮುಂದುವರಿದ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಒಪ್ಪಿಕೊಂಡಿರುವುದಾಗಿ ಸಚಿವರು ತಿಳಿಸಿದರು. ಜಿಲ್ಲಾಧಿಕಾರಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು.
ಪುರಸಭಾಧ್ಯಕ್ಷೆ ವಸಂತಿ ಸಿ. ಉಪಾಧ್ಯಕ್ಷೆ ಯಾಸ್ಮೀನ್, ಸಹಾಯಕ ಆಯುಕ್ತ ಡಾ. ಅಶೋಕ್, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬುಡಾ ಅಧ್ಯಕ್ಷ ಪಿಯುಸ್ ಎಲ್.ರೊಡ್ರಿಗಸ್, ಸಜೀಪನಡು ಪಿಡಿಓ ಸೂರ್ಯನಾರಯಣ ಐತಾಳ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪ್ರಭಾ, ಸದಸ್ಯರಾದ ಸದಾಶಿವ ಬಂಗೇರಾ, ವಾಸು ಪೂಜಾರಿ, ರಾಮಕೃಷ್ಣ ಆಳ್ವ, ಮಹ್ಹಮದ್ ಶರೀಫ್, ಗಂಗಾಧರ, ಚಂಚಾಲಾಕ್ಷಿ, ಮೊನಿಶ್ ಅಲಿ, ಜೆಸಿಂತಾ, ಸಂಜೀವಿ, ಜಗದೀಶ ಕುಂದರ್, ಪ್ರವೀಣ್ ಬಿ., ಮಹಮ್ಮದ್ ನಂದರಬೆಟ್ಟು, ಬಿ. ಮೋಹನ್ ಇದ್ದರು.
ಪುರಸಭೆಗೆ ಬರದ ಜಿಲ್ಲಾಧಿಕಾರಿ: ಪುರಸಭೆಯಲ್ಲಿ ಅವ್ಯವಹಾರ ನಡೆದಿದೆ, ಹಣ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ, ಇದು ಲೋಕಾಯುಕ್ತ ಅಂಗಳದಲ್ಲಿರುವ ಸಂದರ್ಭ ಕಾಮಗಾರಿಗೆ ಅಸ್ತು ಎನ್ನಲಾಗಿದೆ ಹೀಗೆ ಹಲವಾರು, ಹಲವಾರು ಸಮಸ್ಯೆಗಳ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದರು ಈ ವರೆಗೆ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತೆತ್ತಿಲ್ಲ ಅಧಿಕಾರ ಸ್ವೀಕರಿಸಿದ ಬಳಿಕ ಒಮ್ಮೆಯೂ ಬಂಟ್ವಾಳ ಪುರಸಭೆಗೆ ಕಾಲಿಟ್ಟಿಲ್ಲ ಎನ್ನುವ ಬೇಸರವನ್ನು ಇಲ್ಲಿನ ಜನಪ್ರತಿನಿಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಇಂದು ಕೂಡಾ ಸಭೆ ನಡೆಯುವುದ ಪುರಸಭೆಯಲ್ಲಿ ಎಂದು ನಿಗದಿಯಾಗಿತ್ತು ಆದರೆ ಕೊನೆಯ ಕ್ಷಣದ ಬೆಳವಣಿಗೆಯೊಂದರಲ್ಲಿ ಅದು ಬಂಟ್ವಾ:ಳ ಪ್ರವಾಸಿ ಮಂದಿರಕ್ಕೆ ಶಿಪ್ಟ್ ಆಯಿತು. ಹಾಗಾಗಿ ಬಿ.ಜೆ.ಪಿ. ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಪುರಸಭೆಗೂ ಜಿಲ್ಲಾಧಿಕಾರಿಗೂ ಯಾವ ದ್ವೇಷ ಎನ್ನುವುದು ಗೊತ್ತಿಲ್ಲ. ಅಂತೂ ಇದೇ ದಾರಿಯಾಗಿ ಬೆಳ್ತಂಗಡಿ ಪುತ್ತೂರು, ಸುಳ್ಯ ಕಡೆಗೆ ಹೋದರೂ ಬಂಟ್ವಾಳದ ಪುರಸಭೆಯ ಮೆಟ್ಟಿಲು ಈ ವರೆಗೆ ಹತ್ತಿಲ್ಲ .ಉತ್ತಮ ಜಿಲ್ಲಾಧಿಕಾರಿ ಎಂದು ಹೆಸರು ಪಡೆದಿರುವ ಇವರು ಬಂಟ್ವಾಳದ ಜನೆ ಸಮಸ್ಯೆಗೆ ಯಾಕೆ ಸ್ಪಂಧಿಸುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಕೂಡಾ ಮಾಡುತ್ತಿದ್ದಾರೆ. ಕಸದ ಸಮಸ್ಯೆ ಯ ಬಗ್ಗೆ ಹಲವಾರು ಭಾರಿ ಇವರಲ್ಲಿ ಮನವಿ ಮಾಡಿದರೂ ಇವರು ಮಾರ್ಚ ಕೊನೆಯ ಸಂದರ್ಭದಲ್ಲಿ ಈ ಬಗ್ಗೆ ಅದು ಸಚಿವರ ಒತ್ತಡಕ್ಕೆ ಮಣಿದು ಇಂದು ಸಭೆ ನಡೆಸಿರುವುದರ ಹಿಂದೆ ಕಾರಣವಿರಬಹುದೇ. ಯಾವುದೇ ಕಾರಣಕ್ಕೆ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಖರಣಾ ಘಟಕವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿರುವ ಉಳ್ಳಾಲ ಶಾಸಕರು ಇವರಿಗೆ ಮಾಡದಂತೆ ಒತ್ತಡ ಹಾಕಿದ್ದಾರಾ ಎನ್ನುವ ನೂರಾರು ಪ್ರಶ್ನೆಗಳು ಇಲ್ಲಿನ ಜನರದ್ದು.

By suddi9

Leave a Reply

Your email address will not be published. Required fields are marked *