ಮೂಡುಬಿದಿರೆ: ಇಲ್ಲಿನ ಜೈನ ಹೈಸ್ಕೂಲ್‍ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ 31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಮೂವತ್ತು ವರ್ಷಗಳ ಅವಧಿಗೆ ಹೈಸ್ಕೂಲಿನಲ್ಲಿ ಎನ್.ಸಿ.ಸಿ.ಯ ವಾಯುದಳದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ಈ ಅವಧಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಎನ್.ಸಿ.ಸಿ ಕೆಡೆಟ್‍ಗಳಿಗೆ ತರಬೇತಿ ನೀಡುವಲ್ಲಿ ಶ್ರಮಿಸಿದ್ದರು.

ಮೈಸೂರು, ಮಡಿಕೇರಿ, ಬಿಜಾಪುರ, ಬೆಂಗಳೂರು, ಒಡಿಸ್ಸಾ ಸಹಿತ 25ಕ್ಕೂ ಅಧಿಕ ಕಡೆಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿರುವ ಅವರು ಎನ್,ಸಿ.ಸಿ ಮುಖ್ಯಾಧಿಕಾರಿಯಾಗಿ ತರಬೇತಿ ಅವಧಿಯ 30 ವರ್ಷಗಳಲ್ಲಿ ನಡೆಸಿದ ವಾರ್ಷಿಕ ಎ ಸರ್ಟಿಫಿಕೇಟ್ ಪರೀಕ್ಷೆಗಳಲ್ಲಿ ನಿರಂತರ ಶೇ 100 ಫಲಿತಾಂಶ ಪಡೆದಿದ್ದಾರೆ. ಇವರ ಹಲವಾರು ವಿದ್ಯಾರ್ಥಿಗಳು ಪೋಲೀಸ್ ಇಲಾಖೆ ಮತ್ತು ಭೂ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
