ಯಾವುದೇ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಬ್ರಹ್ಮಕಲಶೋತ್ಸವ ಮೊದಲಾದ ಯಾವುದೇ ಸಮಾರಂಭಗಳಲ್ಲಿ ಅದರ ಯಶಸ್ವಿಯ ಹಿಂದೆ ಮಹಿಳೆಯರದ್ದೂ ಮಹತ್ತರ ಪಾಲು ಇದೆ. ಉತ್ಸವದ ಮೊದಲು ನಡೆಯುವ ಬಹುತೇಕ ಪೂರ್ವಭಾವಿ ಸಿದ್ಧತೆಯಿಂದ ಮೊದಲುಗೊಂಡು ಉತ್ಸವ ಮುಗಿದ ಮೇಲೂ ಅಲ್ಲಿ ಕಾಣಸಿಗುವುದು ಆಯಾಯ ಊರಿನ ಮಹಿಳೆಯರು ಮಾತ್ರ. ಅದು ಗುಡಿಸಿಕೊಂಡೋ, ಒರೆಸಿಕೊಂಡೋ, ಇಲ್ಲವೇ ಪಾತ್ರೆ ತೊಳೆದುಕೊಂಡೋ ಅವರು ತಮ್ಮ ಕಾಯಕದಲ್ಲಿ ತಲ್ಲೀನರಾಗಿರುತ್ತಾರೆ.

download
ಆದರೆ ಇಂತಹ ಶ್ರಮಜೀವಿ ಮಹಿಳೆಯರು ಅಥವಾ ಈ ಮಹಿಳೆಯರ ಪ್ರತಿನಿಧಿಗಳೆನಿಸಿಕೊಂಡವರಾದರೂ ಉತ್ಸವದ ಸಂದರ್ಭದ ಯಾವುದೇ ಕಾರ್ಯಕ್ರಮಗಳಲ್ಲಿಯೂ ಮುಖ್ಯ ವಾಹಿನಿಯಲ್ಲಿ ಕಾಣುವುದಿಲ್ಲ, ದೇವಸ್ಥಾನ-ಇಲ್ಲವೇ ಉತ್ಸವ ಸಂಬಂಧಿತ ಪ್ರಮುಖ ಸಮಿತಿಗಳಲ್ಲೂ ಈ ಮಹಿಳೆಯರ ಹೆಸರು ಇರುವುದಿಲ್ಲ. ಆದರೂ ಅವರ್ಯಾರೂ ಧ್ವನಿ ಎತ್ತುವುದಿಲ್ಲ, ಭಯವೋ? ಭಕ್ತಿಯೋ ಗೊತ್ತಿಲ್ಲ.
ಇತ್ತೀಚೆಗೆ ಒಂದು ದೇವಸ್ಥಾನದ ಮಹಿಳಾ ಸಮಿತಿಯ ಪ್ರಮುಖರಿಗೆ ಸಂಘಟನೆಯ ಬಗ್ಗೆ ತರಬೇತಿ ಮಾಡುತ್ತಿದ್ದೆ. ನೀವು ದೇವಸ್ಥಾನದ ಯಾವ ಸಮಿತಿಯಲ್ಲಿ ಇದ್ದೀರಿ ಎಂದು ಕೇಳಿದಾಗ ಅವರ ಬಾಯಿಯಿಂದ ಬಂದ ಉತ್ತರ ನನಗೆ ಅಚ್ಚರಿ ಮೂಡಿಸಿತು. ಅವರಲ್ಲಿ ಯಾವ ಮಹಿಳೆಯರೂ ದೇವಸ್ಥಾನದ ಪ್ರಮುಖ ಸಮಿತಿಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಬದಲಾಗಿ ಅವರು ಇದ್ದದ್ದು ನೈರ್ಮಲ್ಯ ಸಮಿತಿ, ಪಾನೀಯ ವಿತರಣಾ ಸಮಿತಿ, ಸ್ವಚ್ಚತಾ ಸಮಿತಿ, ಪಾತ್ರೆ ತೊಳೆಯುವ ಸಮಿತಿ…ಮೊದಲಾದ ಹೆಸರಿನ ಸಮಿತಿಗಳಲ್ಲಿ, ಅಥರ್ಾತ್ ಕೆಲಸದ ಆಳುಗಳಂತಹ ಸ್ಥಿತಿಯಲ್ಲಿ. ಮನೆಯಲ್ಲಿಯೂ ಮಹಿಳೆಯರನ್ನು ಹೀಗೆ ದುಡಿಸಿಕೊಳ್ಳುವ ಪುರುಷ ವಿಕೃತ ಮನಸ್ಸುಗಳು ದೇವಾಲಯಗಳಲ್ಲೂ ಹೀಗೆ ದುಡಿಸಿಕೊಳ್ಳುತ್ತವೆ, ಮನೆಯಲ್ಲಿಯೂ ಈ ಕೆಲಸಗಳಿಗೆ ಅವರಿಗೆ ಸಂಬಳವಿಲ್ಲ, ಇಲ್ಲಿಯೂ ಇಲ್ಲ. ಹೆಸರಿಗೆ ಇದು ದೇವರ ಸೇವೆಯೇ ಆದರೂ ಇದನ್ನು ಮಹಿಳೆಯರೇ ಮಾಡಬೇಕೆಂಬ ನಿಯಮಾವಳಿಗಳನ್ನು ಮಾಡಿದವರು ಯಾರು? ಬಹುತೇಕ ಕಡೆಗಳಲ್ಲಿ ದೇವಸ್ಥಾನದ ಸುತ್ತ ಶುಚಿಯಾಗಿರದಿದ್ದರೆ ಪ್ರಮುಖ ಸಮಿತಿಯ ಪುರುಷ ಅಧ್ಯಕ್ಷರು, ಪದಾಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುವುದು ಇದೇ ಶ್ರಮಜೀವಿ ಮಹಿಳೆಯರನ್ನೇ. ಮಹಿಳೆಯರಿಗೆ ಎಲ್ಲೆಲ್ಲೂ ಬೆನ್ನು ಬಗ್ಗಿಸಿ, ಬೆವರಿಳಿಸಿ ದುಡಿಯಬೇಕೆನ್ನುವುದು ಯಾರು ವಿಧಿಸಿದ ಶಾಪವೋ?
ಒಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಹೇಳಿದ ಮಾತು ಈಗಲೂ ನನ್ನ ಹೃದಯದಲ್ಲಿ ನೋವಾಗಿ ಕಾಡುತ್ತಿದೆ. ” ನಾವು ನಮ್ಮ ಸಮಿತಿಯಲ್ಲಿ ಮಹಿಳೆಯರಿಗೂ ಅವಕಾಶ ಕೊಡುತ್ತೇವೆ. ಯಾಕೆಂದರೆ ನಮಗೆ ಜಾತ್ರೆ ಸಂದರ್ಭ ಕ್ಲಿನಿಂಗ್ ವ್ಯವಸ್ಥೆಗೆ ಸುಲಭವಾಗುತ್ತದೆ” ಎಂದು. ಯಾಕೆ ಸ್ವಾಮಿ? ಬಿಳಿ ಪಂಚೆ, ಬಿಳಿ ಶರ್ಟ್ , ಬಿಳಿ ಶಾಲು ಸ್ವಲ್ಪ ಹೊತ್ತು ಬದಿಗಿಟ್ಟು ಪುರುಷರು ಸ್ವಲ್ಪ ಕ್ಲಿನಿಂಗ್ ಮಾಡಿದರೆ, ಹಿಡಿಸೂಡಿ ಹಿಡಿದರೆ ಏನಾದರೂ ಮೈಯಲ್ಲಿ ಬರುತ್ತದೆಯೇ? ಮಹಿಳೆಯರೇ ದೇವಸ್ಥಾನದಲ್ಲೂ ಗುಡಿಸಬೇಕು, ತೊಳೆಯಬೇಕು, ಒರೆಸಬೇಕು ಎಂದು ಯಾವುದಾದರೂ ಧರ್ಮಗ್ರಂಥದಲ್ಲಿ ಬರೆದಿದೆಯೇ?ದೇವರ ಸೇವೆಯ ಹೆಸರಿನಲ್ಲೂ ಮಹಿಳೆಯರನ್ನೇ ದುಡಿಸಿಕೊಳ್ಳುವುದು ಯಾಕೆ?
ಧರ್ಮ ಸಭೆಯಲ್ಲಿ, ಸಮಾಜೋತ್ಸವದಲ್ಲಿ, ಭಾಷಣದಲ್ಲಿ ಹೆಣ್ಣನ್ನು ತಾಯಿ, ಮಾತೃಶ್ರೀ, ಲಕ್ಷ್ಮೀ, ಶಾರದೆ ಎಂದೆಲ್ಲಾ ಬಿಗಿಯುವ ನಾವು ದೇವಸ್ಥಾನದಲ್ಲಾದರೂ ಆ ಮಾತೆಯರಿಗೆ ಸೂಕ್ತ ಸ್ಥಾನ ಮಾನ ಕೊಡಬೇಕು. ದೇವಸ್ಥಾನದ ಆಡಳಿತ ಮಂಡಳಿ, ಪ್ರಮುಖ ಸಮಿತಿಗಳಲ್ಲಿ ಗಂಡಸರಂತೆ ಹೆಂಗಳೆಯರಿಗೂ ಸೂಕ್ತ ಅವಕಾಶ ಸಿಗಬೇಕು. ಮೀಸಲಾತಿಯನ್ನೇ ನೆಪವಾಗಿಟ್ಟುಕೊಂಡು ಕಾಟಾಚಾರಕ್ಕೆ ಒಂದಿಬ್ಬರು ಮಹಿಳೆಯರನ್ನು ಸೇರಿಸಿಕೊಳ್ಳುವ ಬದಲು ಸರಿಸಮಾನ ಸ್ಥಾನಗಳು ಸಿಗುವಂತಾಗಬೇಕು. ದೇವಸ್ಥಾನಕ್ಕಾಗಿ ದುಡಿಯುವ ಎಲ್ಲಾ ಮಹಿಳೆಯರಿಗೂ ಅವಕಾಶ ನೀಡುವುದು ಕಷ್ಟಸಾಧ್ಯವಾಗಿದ್ದು ಅವರ ಪ್ರತಿನಿಧಿಯಾಗಿ ನಾಲ್ಕೈದು ಮಹಿಳೆಯರನ್ನಾದರೂ ಪ್ರಮುಖ ಸಮಿತಿಗಳಲ್ಲಿ ಸೇರಿಸಿಕೊಳ್ಳುವ ಮೂಲಕ ಮಹಿಳೆಯರೂ ಧಾರ್ಮಿಕ ಕ್ಷೇತ್ರದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು.
ಉತ್ಸವದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಮಾರಂಭಗಳನ್ನೇ ಗಮನಿಸೋಣ.. ನಾಲ್ಕೈದು ದಿನಗಳ ಧಾರ್ಮಿಕ ಸಭೆ ಇದ್ದರೂ, ಅದರಲ್ಲಿ ನೂರಕ್ಕೂ ಹೆಚ್ಚು ಅತಿಥಿಗಳಿದ್ದರೂ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಏನಿದರ ಅರ್ಥ? ಮಹಿಳೆಯರಿಗೆ ಅತಿಥಿಯಾಗುವ, ಭಾಷಣ ಮಾಡುವ ಸಾಮಥ್ರ್ಯವಿಲ್ಲವೆಂದೇ? ಕೆಲೆವೆಡೆ ಮಹಿಳೆಯರನ್ನು ವೇದಿಕೆಯ ತೆರೆಯ ಮರೆಯಲ್ಲೇ ಬಳಸಿಕೊಳ್ಳಲಾಗುತ್ತಿದೆ. ಸಮಾರಂಭಕ್ಕೆ ಬೇಕಾದ ವಸ್ತುಗಳನ್ನು ಜೋಡಿಸಿಡುವುದು, ಬಹುಮಾನಗಳನ್ನು ತಂದುಕೊಡುವುದು, ಹೆಚ್ಚೆಂದರೆ ಅತಿಥಿ ಸತ್ಕಾರ ಮಾಡುವುದು…ಮತ್ತೆ ಕೆಲವರು ಪಾತ್ರೆ ತೊಳೆಯುವುದು..ಇಷ್ಟಕ್ಕೆ ಮಹಿಳೆಯರ ಸಾಮಥ್ರ್ಯವನ್ನು ಸೀಮಿತಗೊಳಿಸಲಾಗುತ್ತಿದೆ. ಸ್ವ ಇಚ್ಚೆಯಿಂದ, ನಿಷ್ಠೆಯಿಂದ ಯಾರೂ ಯಾವುದೇ ಕೆಲಸವನ್ನು ಮಾಡಲಿ, ತಪ್ಪಲ್ಲ. ಆದರೆ ನೀವು ಮಹಿಳೆಯರು, ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹದ್ದೇ ಕೆಲಸ ಮಾಡಲು ಇರುವವರು ಎಂದು ಹೇರುವುದು ಮಹಿಳಾ ಶೋಷಣೆಯಲ್ಲದೆ ಇನ್ನೇನು?
ಧಾರ್ಮಿಕ ಕ್ಷೇತ್ರದಲ್ಲಿ ನಡೆಯುವ ಸಮಾರಂಭಗಳಲ್ಲಿ ಪುರುಷ ಅತಿಥಿಗಳೇ ಮೆರೆಯುವ ಬದಲಾಗಿ ಮಹಿಳೆಯರಿಗೂ ಸಮಾನ ವೇದಿಕೆ ಸಿಗುವಂತಾಗುವುದು ಉತ್ತಮ ಲಕ್ಷಣ. ದೇವಸ್ಥಾನದ ಸುತ್ತ-ಮುತ್ತಲಿರುವ ಪೊದರು-ಗಿಡಗಂಮಟಿಗಳನ್ನು ಕಡಿದು, ಕಸ-ಕಡ್ಡಿ ತ್ಯಾಜ್ಯಗಳನ್ನು ಹೆಕ್ಕಿ ಅಂಗಣಕ್ಕೆ ಸೆಗಣಿ ಹಾಕಿ ಶುಚಿಗೊಳಿಸುವ ಹೆಣ್ಣು ಮಕ್ಕಳು, ತಾಯಂದಿರ ಕಾಯಕವೂ ಪವಿತ್ರವೆಂದು ಧರ್ಮ ಮುಖಂಡರೆನಿಸಿಕೊಂಡ ಪುರುಷ ಮನಸ್ಸುಗಳಿಗೆ ಅರ್ಥವಾಗುವುದು ಒಳಿತು.
ರಾತ್ರಿ ಹಗಲೆನ್ನದೇ ಉತ್ಸವಗಳ ಯಶಸ್ವಿಗಾಗಿ ದುಡಿದರೂ ತಾಯಂದಿರನ್ನು ಇನ್ನೂ ಮಡಿ ಮೈಲಿಗೆಯ ನೆಪದಲ್ಲಿ ದೇವರಿಂದ ದೂರವೇ ಇಡುವ ಪದ್ಧತಿ ಹಲವೆಡೆ ಜಾರಿಯಲ್ಲಿದೆ. ದೇವಸ್ಥಾನದ ಸುತ್ತೆಲ್ಲಾ ಶುಚಿಗೊಳಿಸಿ ದೇವಸ್ಥಾನ ಆಕರ್ಷನೀಯವಾಗಿ ಕಾಣುವಂತೆ ಮಾಡುವ ಮಹಾಮಾತೆಯರಿಗೆ ಅಲ್ಲಿ ಹೋಗಬಾರದು, ಇಲ್ಲಿ ಹೋಗಬಾರದು, ಅದನ್ನು ಮುಟ್ಟಬಾರದು, ಅಲ್ಲಿ ದಾಟಬಾರದು ಎಂಬ ಅಲಿಖಿತ ನಿಯಮಗಳನ್ನೂ ಹೇರಲಾಗುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರದ್ಧಾಭಕ್ತಿಯಿಂದ ಸೇವೆ ಮಾಡುವ ಮಾತೆಯರನ್ನೇ ದೇವರಿಂದ, ದೇವಸ್ಥಾನದಿಂದ ದೂರವಿಡುವುದೆಂದರೆ ಹೆತ್ತ ತಾಯಿಯನ್ನು, ಹೊತ್ತ ಭೂಮಿಯನ್ನು, ಪೊರೆಯುವ ಪೃಕೃತಿಯನ್ನು ದೂರವಿಟ್ಟಂತೆ ಅಲ್ಲವೆ?
ಉತ್ಸವದ ಮೊದಲು ತಿಂಗಳುಗಟ್ಟಲೆ ಹೊರಾಂಗಣ, ಒಳಾಂಗಣ ಎಂದು ರಾತ್ರಿ ಹಗಲೆನ್ನದೆ ದುಡಿಯುವ ಶ್ರಮಜೀವಿ ಮಹಿಳೆಯರ ಪೈಕಿ ಕೆಲವರಿಗೆ ಉತ್ಸವದ ಸಂದರ್ಭ ದೇವಳದ ವಠಾರಕ್ಕೂ ಬರದಾರೆದೆನ್ನುವ ಆದೇಶ ಕೆಲೆವೆಡೆ ಇದೆ. ನಮಗೆ ಬರಲಾಗುವುದಿಲ್ಲ ಎನ್ನುವ ಉತ್ತರ ಹಳ್ಳಿಯ ನೊಂದ ಮಹಿಳೆಯರಿಂದ ಈಗಲೂ ಕೇಳಿ ಬರುತ್ತಿದೆ. ಪೃಕೃತಿ ಸಹಜ ಕ್ರಿಯೆಯನ್ನೇ ಸೂತಕ, ಅಶುದ್ಧ ಎಂದು ನಂಬಿಸಿ ಮಹಿಳೆಯರನ್ನು ದೇವಾಲಯಗಳಿಂದ, ಉತ್ಸವಗಳಿಂದ, ಶುಭ ಕಾರ್ಯಗಳಿಂದ ಹೊರಗಿಡುವ ಹಿಂದಿರುವ ಷಡ್ಯಂತ್ರವಾದರೂ ಯಾವುದು? ನಿಜಕ್ಕೂ ಹೆಣ್ಣು ಅಶುದ್ಧಳೇ? ಹೆಣ್ಣೇ ಸೃಷ್ಠಿಯ ಕಣ್ಣು ಅಲ್ಲವೇ? ಅಶುದ್ಧಳೆಂದು ಹೆತ್ತಬ್ಬೆಯನ್ನು ದೂರವಿಡುವುದೇ?

By suddi9

Leave a Reply

Your email address will not be published. Required fields are marked *