ಚಿಕ್ಕಮಗಳೂರು: ಜೋಕಟ್ಟೆಯ ಕಬೀರ್ ಸಾವಿಗೆ ಕಾರಣವಾದ ತನಿಕೋಡ್ ಸೂಟ್ ಔಟ್ ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಲ್ಲ ಎಂದು ಮೆಜಿಸ್ಟೀರಿಯಲ್ ತನಿಖಾ ವರದಿ ಹೇಳಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಈ ಶೂಟ್ ಔಟ್ ಬಗ್ಗೆ ಸರ್ಕಾರ ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ಅವರಿಂದ ತನಿಖೆ ನಡೆಸಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿತ್ತು. ಈಗ ವರದಿ ಸಿದ್ಧವಾಗಿದ್ದು ಅಂದು ಆಕಸ್ಮಿಕವಾಗಿ ಗುಂಡು ಕಬೀರ್ ಗೆ ತಾಗಿತ್ತು ಹೊರತು ಉದ್ದೇಶಪೂರ್ವಕವಾಗಿ ಅಲ್ಲವೆಂದು ಹೇಳಲಾಗಿದೆ.
ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಕಬೀರ ಹಾಗೂ ಇತರರು ಚೆಕ್ ಪೋಸ್ಟ್ ಬಳಿ ಇದ್ದಾಗ ಅಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ನಕ್ಸಲ್ ನಿಗ್ರಹಪಡೆಯ ನವೀನ್ ಗುಂಡು ಹಾರಿಸಿದ್ದರು. ಆಗ ಕಬೀರ ಸಾವು ಸಂಭವಿಸಿತ್ತು. ಈ ಘಟನೆ ವ್ಯಾಪಕ ಪ್ರತಿಭಟನೆಗೂ ಕಾರಣವಾಗಿತ್ತು. ಈ ಘಟನೆಯಲ್ಲಿ ನವೀನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಮೆಜಿಸ್ಟೀರಿಯಲ್ ತನಿಖೆ ವೇಳೆ ಕಬೀರ್ ಕುಟುಂಬದವರು ಹೇಳಿಕೆ ಕೊಡಲು ಮುಂದೆ ಬರಲಿಲ್ಲವೆನ್ನಲಾಗಿದೆ. ಹೇಳಿಕೆ ಕೊಡಲು ಸಮನ್ಸ್ ನೀಡಿದ್ದರೂ ಕುಟುಂಬದವರು ಬರದ ಕಾರಣ ಜಿಲ್ಲಾಧಿಕಾರಿಯವರು ತಮ್ಮ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆನ್ನಲಾಗಿದೆ. 2014ರ ಏಪ್ರಿಲ್ 17 ರಂದು ಈ ಘಟನೆ ನಡೆದಿತ್ತು
