Published On: Sat, Mar 21st, 2015

ತುತ್ತು ಅನ್ನಕ್ಕೂ ಜಾತಿಯ ಗೋಡೆಯೇ?

ಸುದ್ದಿ9 ಬಂಟ್ವಾಳ: ಅದೊಂದು ಪ್ರಸಿದ್ಧ ಆರಾಧನಾ ಕ್ಷೇತ್ರ. ವರ್ಷದ ಕ್ಷೇತ್ರ ಬೇಟಿ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿದ್ದ ನಾನು ಕುಟುಂಬ ಸದಸ್ಯರೊಡನೆ ಬಿಳಿ ಪಂಚೆ, ಬಿಳಿ ಶರ್ಟ್ , ಬಿಳಿ ಶಾಲು ಹಾಕಿ ನಿಂತಿದ್ದೆ. ಆಗ ಅನ್ನಸಂತರ್ಪಣೆಯ ಸಮಯ. ಅಲ್ಲಲ್ಲಿ ನೂಕು ನುಗ್ಗಲು.

ದೇವಸ್ಥಾನದ ಪ್ರಮುಖರು ಸರತಿ ಸಾಲಿನಲ್ಲಿ ನಿಂತಿದ್ದ ನನ್ನನ್ನು ನೋಡಿದವರೇ ನೀವು ಮೇಲೆ ಹೋಗಿ ಎಂದರು. ಬಹುಶಃ ನನ್ನ ಪರಿಚಯವಿರಬಹುದು, ಅತಿಥಿ ಹಾಲ್ನಲ್ಲಿ ಊಟ ಕೊಡುತ್ತಾರೋ ಎಂದು ಯೋಚಿಸಿ ನನ್ನೊಟ್ಟಿಗೆ ಇದ್ದ ಇತರರೆಲ್ಲರನ್ನೂ ಕೆಲಗಡೆಯ ಹಾಲ್ನಲ್ಲೇ ಬಿಟ್ಟು ಮೇಲಿನ ಮಹಡಿಯ ಹಾಲ್ಗೆ ಹೋದೆ. ಅಲ್ಲಿ ಊಟಕ್ಕೆ ಕೆಲವರು ಕುಳಿತಿದ್ದರು. ನಾನು ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ತಕ್ಷಣ ಒಬ್ಬರು ನನ್ನ ಹತ್ತಿರ ಬಂದು ಮೆಲ್ಲಗೆ ನೀವು……….? ನಿಮಗೆ ಇಲ್ಲಿ ಅಲ್ಲ, ನೀವು ಕೆಳಗೆ ಹೋಗಿ ಎಂದರು.

ಏನೂ ತೋಚದೆ ನಾನು ಕೆಳಗೆ ಬಂದಾಗ ನನ್ನೊಟ್ಟಿಗೆ ಇದ್ದ ಎಲ್ಲರೂ ಊಟಕ್ಕೆ ಕುಳಿತಿದ್ದರು. ಊಟ ಆರಂಭವಾಗಿತ್ತು. ನಾನು ಮತ್ತೆ ಅರ್ಧ ಗಂಟೆ ಅಲ್ಲೇ ಕಾಯಬೇಕಾಯಿತು. ಇರಲಿ..ಕೊನೆಗೂ ಹೊಟ್ಟೆ ತುಂಬಾ ಊಟ ಸಿಕ್ಕಿತು. ಮೇಲಾದರೇನು, ಕೆಳಗಾದರೇನು? ಹಸಿವು ನೀಗಿತು ತಾನೆ. ತುತ್ತು ಅನ್ನ, ಬೊಗಸೆ ನೀರಿಗೆ ಜಾತಿಯಾವುದಾದರೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗಂಟೆ ಕಟ್ಟಿದವರ್ಯಾರು?:
ಅದೇ ತಿರುಗಾಟದಲ್ಲಿ ಮತ್ತೊಂದು ದೇವಸ್ಥಾನದಲ್ಲಿ ಪೂಜೆಯ ಸಮಯಕ್ಕೆ ಗಂಟೆ ಬಾರಿಸಲೆಂದು ಕೈ ಎತ್ತಿ ಮೇಲೆ ನೋಡಿದೆ. ನನಗೂ ಅಚ್ಚರಿ. ” ಈ ಗಂಟೆಯನ್ನು ಆಡಳಿತ ಧರ್ಮದರ್ಶಿ ಹೊರತು ಪಡಿಸಿ ಯಾರೂ ಬಡಿಯುವಂತಿಲ್ಲ” ಎಂದು ಗಂಟೆಯಲ್ಲೇ ಬರೆಯಲಾಗಿತ್ತು. ಗಂಟೆಯಿಂದ ಶಬ್ಧವಲ್ಲದೆ ಇನ್ನೇನು ಬಂದೀತು? ಆಡಳಿತ ಧರ್ಮದರ್ಶಿ ಬಡಿದರೆ ಮಾತ್ರ ಶಬ್ಧ ಬರುವುದೇ? ನಿಜಕ್ಕೂ ಆ ಗಂಟೆಯನ್ನು ದೇವಸ್ಥಾನಕ್ಕೆ ಕೊಟ್ಟವರ್ಯಾರೋ? ದೇವಳದ ಮಹಡಿ ಏರಿ ಗಂಟೆಯನ್ನು ಕಟ್ಟಿದ ಕರ್ಮಜೀವಿ ಯಾರೋ? ಆದರೂ ಗಂಟೆಗೂ ಜಾತಿ, ಸ್ಥಾನ-ಮಾನದ ಲೇಪನ. ಇದೆಷ್ಟು ಸರಿ? ಪ್ರಶ್ನೆಯಾಗಿಯೇ ಉಳಿದಿದೆ.

ಕಲೆಗೂ ಜಾತಿ ಇದೆಯೇ?:
ಬ್ರಹ್ಮಕಲಶ ಸಂಭ್ರಮವೊಂದಕ್ಕೆ ಕಲಾ ತಂಡಗಳನ್ನು ಆಯ್ಕೆ ಮಾಡುವ ಸಂದರ್ಭವದು. ನಾನು ಸಾಂಸ್ಕೃತಿಕ ಸಮಿತಿಯ ಸಂಚಾಲಕನಾಗಿದ್ದರಿಂದ ತಂಡಗಳ ಆಯ್ಕೆಯ ಜವಾಬ್ದಾರಿ ನನ್ನ ಮೇಲೂ ಇತ್ತು. ಸಭೆಯಲ್ಲಿ ನಾನಾ ತಂಡಗಳ ಹೆಸರು ಬಂತು. ನಾನೂ ಒಂದು ತಂಡವನ್ನು ಸೂಚಿಸಿದೆ. ತಕ್ಷಣ ಅಲ್ಲಿದ್ದ ಧರ್ಮದರ್ಶಿ ಗಳಲ್ಲೊಬ್ಬರು ” ಛೀ ಕೊಳಕು ಅದೆಲ್ಲಾ ಇಲ್ಲಿಗೆ ಆಗುವಂತದ್ದಲ್ಲ” ಎನ್ನಬೇಕೆ? ಯಾಕೆ ಆಗಲ್ಲ? ಅವರೇನು ಕೆಟ್ಟ ಸಾಹಿತ್ಯವಿರುವ ಹಾಡುಗಳನ್ನು ಹಾಡಿದವರಲ್ಲ. ಒಂದಷ್ಟು ಜನಜಾಗೃತಿ ಮೂಡಿಸುವ, ಪರಿಸರ ಕಾಳಜಿಯ ಹಾಡುಗಳನ್ನೇ ಹಾಡುತ್ತಾ ಕಲಾಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು. ಆದರೆ ಅವರ ಹಾಡು ಬೇಡವೆಂದರೆ? ಕೊನೆಗೂ ಗೊತ್ತಾಯಿತು. ಅವರ ಹಾಡು ಮುಖ್ಯವಲ್ಲ, ಅವರ ಜಾತಿ ಮುಖ್ಯ. ಪುಣ್ಯಕ್ಕೆ ಅವರು ದಲಿತ ಎನ್ನುವ ಶ್ರೇಷ್ಠ ಜಾತಿಯಲ್ಲಿ ಹುಟ್ಟಿದವರು. ಹೇಗಿದೆ ನೋಡಿ. ಎಲ್ಲರನ್ನೂ ಒಟ್ಟುಗೂಡಿಸುವ, ಸಮಾಜದಲ್ಲಿ ಜಾಗೃತಿ ಮೂಡಿಸುವ ಕಲಾ ಪ್ರದರ್ಶನಗಳ ಸಂದರ್ಭದಲ್ಲೂ, ಎಲ್ಲಾ ಜಾತಿಗಳ ಕಲಾವಿದರು ಕಟ್ಟಿಕೊಂಡ ಸಾಂಸ್ಕೃತಿಕ ಪ್ರಕಾರಗಳಿಗೆ ಇತರ ತಂಡಗಳಂತೆ ಅವಕಾಶ ಸಿಗುತ್ತಿಲ್ಲ. ಕಲೆಯಲ್ಲೂ ಜಾತಿ ಶ್ರೇಷ್ಠತೆಯ ಹುಡುಕಾಟ. ಇದು ಸರಿಯೇ?

ಅವರು ಅತಿಥಿಯಾಗಲ್ವಂತೆ:
ಇಂದಿಗೂ ಕೆಲವೆಡೆ ನಡೆಯುವ ಧಾರ್ಮಿಕ ಸಮಾರಂಭಗಳಲ್ಲಿ ಜಾತಿಯ ಹೆಸರಿನಲ್ಲಿ ಕೆಲವು ಸಮುದಾಯವನ್ನು ಎಲ್ಲೂ ಗುರುತಿಸದೇ ಕೀಳಾಗಿ ಕಾಣುತ್ತಿದ್ದೇವೆ. ಸ್ವಾಮೀಜಿಗಳ ಆಹ್ವಾನದ ಸಂದರ್ಭದಲ್ಲೂ ಎಲ್ಲಾ ಜಾತಿ ಸಮುದಾಯದ ಸ್ವಾಮೀಜಿಗಳಿಗೆ ಸಮಾನ ಗೌರವ ಕೊಡುವ ಮನಸ್ಸುಗಳು ಇನ್ನೂ ಬೆಳೆದಿಲ್ಲ. ದೇವಸ್ಥಾನದ ಅಭಿವೃದ್ಧಿ, ಉತ್ಸವಗಳ ಯಶಸ್ವಿಗಾಗಿ ದುಡಿಯುವ ಶ್ರಮಜೀವಿ ವರ್ಗದ, ಎಲ್ಲಾ ಸಮುದಾಯದ ಪ್ರಮುಖರಿಗೆ ಸಮಾನ ವೇದಿಕೆ ಇನ್ನೂ ಸಿಗುತ್ತಿಲ್ಲ. ಧಾರ್ಮಿಕ ಸಮಾರಂಭಗಳಲ್ಲಿ ಅತಿಥಿಗಳ ಆಯ್ಕೆಯಲ್ಲೂ ಜಾತಿ ಶ್ರೇಷ್ಠತೆ, ಹಣ ಬಲವನ್ನಷ್ಟೇ ಗುರುತಿಸಿದರೆ ಧರ್ಮದೊಳಗಿರುವ ಎಲ್ಲಾ ಜಾತಿ, ಉಪಜಾತಿ ಸಮುದಾಯಗಳು ಮುಖ್ಯವಾಹಿನಿಗೆ ಬರುವುದಾದರೂ ಯಾವಾಗ? ಭಗವಂತ ಜಾತಿ ಪ್ರಿಯನೇ? ಭಕ್ತಿ ಪ್ರಿಯನೇ?

.ಗೋಪಾಲ ಅಂಚನ್.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter