ಬಂಟ್ವಾಳ: 2007ರಲ್ಲಿ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಆರಂಭಗೊಂಡ ಬಂಟ್ವಾಳದ ಪಾಲಿಟೆಕ್ನಿಕ್ಗೆ ತನ್ನ ಸ್ವಂತಕಟ್ಟಡ ನಿರ್ಮಾ ಣಗೊಂಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು ಏಳು ವರ್ಷಗಳ ಕಾಲ ವಿದ್ಯಾರ್ಥಿಗಳು, ಉಪನ್ಯಾಸಕರು ಅನುಭವಿಸಿದ ಯಾತನೆಗೆ ಇನ್ನು ಮುಕ್ತಿ ಸಿಗಲಿದೆ. ಮಾ. 22ರಂದು ಭಾನುವಾರ ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ನೂತನ ವಿದ್ಯಾರ್ಥಿನಿ ನಿಲಯ ಏಕ ಕಾಲದಲ್ಲಿ ಲೋಕರ್ಪಣೆಗೊಳ್ಳಲಿದೆ.
2007ರಲ್ಲಿ ಮಂಜೂರಾತಿ:
ಈ ಹಿಂದೆ ಬಂಟ್ವಾಳ ತಾಲೂಕಿನ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಬೇಕಿದ್ದರೆ ಅನಿವಾರ್ಯವಾಗಿ ಮಂಗಳೂರಿನ ಕದ್ರಿಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗಬೇಕಿತ್ತು. ಅಥವಾ ಇತರೇ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆಯ ಬೇಕಿತ್ತು. ಮಂಗಳೂರಿಗೆ ಹೋಗಬೇಕಲ್ಲ ಎನ್ನುವ ಕಾರಣಕ್ಕಾಗಿ ಅದೆಷ್ಟೋ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿರಾದವರೂ ಇದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಂಟ್ವಾಳದಲ್ಲೇ ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಿಸಬೇಕು ಎನ್ನುವ ಇಲ್ಲಿನ ಜನತೆಯ ಬೇಡಿಕೆಗೆ ಮನ್ನಣೆ ಸಿಕ್ಕಿದ್ದು 2007ರಲ್ಲಿ. ಸರ್ಕಾ ರದಿಂದ ಮಂಜೂರಾದ 21 ಪಾಲಿಟೆಕ್ನಿಕ್ಗಳ ಪೈಕಿ ಬಂಟ್ವಾಳಕ್ಕೂ ಸರ್ಕಾರಿ ಪಾಲಿಟೆಕ್ನಿಕ್ ಭಾಗ್ಯ ಒದಗಿಬಂತು.
ಎದುರಾಯಿತು ಕಟ್ಟಡ ಸಮಸ್ಯೆ:
ಪಾಲಿಟೆಕ್ನಿಕ್ ಏನೋ ಮಮಜೂರುಗೊಂಡಿತು. ಆದರೆ ತರಗತಿಗಳನ್ನು ಆರಂಭಿಸಲು ಸೂಕ್ತ ಕಟ್ಟಡ ಯಾವುದು ಎನ್ನುವ ಸಮಸ್ಯೆಯೂ ಕಾಡಲಾರಂಭಿಸಿತು. ಆಗ ನೆರವಿಗೆ ಬಂದಿದ್ದು ಬಂಟ್ವಾಳ ಪೇಟೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ಸರ್ಕಾರಿ ಬೋರ್ಡ್ ಶಾಲೆ. ಧರ್ಮಸ್ಥಳದ ಧರ್ಮಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆ ಎನ್ನುವ ಹೆಗ್ಗಳಿಕೆಯಿರುವ ಈ ಬೋರ್ಡ್ ಶಾಲೆ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿತ್ತು. ಪಾಲಿಟೆಕ್ನಿಕ್ ಮಂಜೂರಾದ ಸಮಯದಲ್ಲಿ ಬೆರಳೆಣಿಕೆ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಕ್ಕ ಮಟ್ಟಿಗೆ ಚೆನ್ನಾಗಿದ್ದ ಈ ಶಾಲೆಯ ಕೊಠಡಿಯಲ್ಲೇ ಪಾಲಿಟೆಕ್ನಿಕ್ ಆರಂಭಿಸುವ ಎನ್ನುವ ಯೋಚನೆಯಂತೆ 2008-09ನೇ ಸಾಲಿನ ತರಗತಿಗಳನ್ನು ಇಲ್ಲಿ ಆರಂಭಿಸಲಾಯಿತು. ಆರಂಭದ ವರ್ಷ ಕೆಲವೊಂದು ಎಡರು ತೊಡರುಗಳನ್ನು ಅನುಭವಿಸಿ ತರಗತಿಗಳು ನಡೆಯಿತು. ಎರಡನೇ ವರ್ಷಕ್ಕೆ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡ ಕಾರಣ ಮತ್ತೆ ಕೊಠಡಿ ಸಮಸ್ಯೆ ಎದುರಾಗಿ ಭಂಡಾರಿಬೆಟ್ಟುವಿನಲ್ಲಿ ಖಾಲಿಯಾಗಿ ಉಳಿದಿದ್ದ ಮಗ್ಗಶಾಲೆ( ಸ್ವಾತಂತ್ರ್ಯ ಪೂರ್ವದಲ್ಲಿ ಗಾಂದೀಜಿ ಭೇಟಿದ ಖ್ಯಾತಿ ಇರುವ ಶಾಲೆ)ಯ ಕೊಠಡಿಗಳನ್ನೂ ಪಾಲಿಟೆಕ್ನಿಕ್ ತರಗತಿಗೆ ಬಳಸಿಕೊಳ್ಳಲಾಯಿತು. ಈ ನಡುವೆ ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಯಿತು. ಅದರ ಕೊಠಡಿಗಳನ್ನು ಪಾಲಿಟೆಕ್ನಿಕ್ ತರಗತಿಗಳಿಗೆ ಉಪಯೋಗಿಸಿಕೊಳ್ಳಲಾಯಿತು. ಈವರೆಗೆ 4 ಬ್ಯಾಚ್ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ನಡೆಸಿ ತೆರಳಿದ್ದು ಪ್ರಸ್ತುತ ವರ್ಷದಲ್ಲಿ 569 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಸ್ವಂತ ಕಟ್ಟಡ ನಿರ್ಮಾಣ:
ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕಸ್ಬ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ನಿವೇಶನ ಕಾಯ್ದಿರಿಸಲಾಯಿತು. 6.09 ಸರ್ಕಾರಿ ಜಮೀನಿನಲ್ಲಿ ಸುಮಾರು 8 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿತ್ತು. ಅಂತಿಮವಾಗಿ 9.8 ಕೋಟಿಗೆ ಟೆಂಡರ್ ಕರೆಯಲಾಗಿದ್ದು 10.06 ಕೋಟಿ ಅಂದಾಜು ವೆಚ್ಚದಲ್ಲಿ 9694 ಚ.ಮೀ. ವಿಸ್ತೀರ್ಣದ ಸುಂದರ ಕಟ್ಟಡ ಎದ್ದು ನಿಂತಿದೆ. 1 ಪ್ರಾಚಾರ್ಯರ ಕೊಠಡಿ, 4 ಸಿಬ್ಬಂದಿಗಳ ಕೊಠಡಿ, 8 ತರಗತಿ ಕೊಠಡಿ, 6 ಪ್ರಯೋಗಾಲಯ, 1 ಡ್ರಾಯಿಂಗ್ ಕೊಠಡಿ, 1 ಗ್ರಂಥಾಲಯ, 4 ಕಾರ್ಯಗಾರ, 1 ಉಗ್ರಾಣ, 11 ಶೌಚಾಲಯಗಳು, 1 ಕಾನ್ಫರೆನ್ಸ್ ಹಾಲ್, 1 ಆಡಳಿತ ಕಚೇರಿಯನ್ನು ನೂತನ ಕಟ್ಟಡ ಹೊಂದಿದೆ. ಇದರ ಪಕ್ಕದಲ್ಲೇ 10 ಕೋಟಿ ವೆಚ್ಚದಲ್ಲಿ ಸರ್ಕಾರದ ಎಂಎಚ್ಆರ್ಡಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿನಿ ನಿಲಯವನ್ನು ನಿರ್ಮಿಸಲಾಗಿದೆ.
ಉದ್ಘಾಟನೆ:
ಮಾ.22 ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಸರ್ಕಾರಿ ಪಾಲಿಟೆಕ್ನಿಕ್ನ ನೂತನ ಕಟ್ಟಡ ಹಾಗೂ ನೂತನ ವಿದ್ಯಾರ್ಥಿನಿಲಯ ಉದ್ಘಾಟನೆಗೊಳ್ಳಲಿದೆ. ಉನ್ನತ ಶಿಕ್ಷಣ ಮತ್ತು ಪ್ರವಾದೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ನಗರಾಭಿವೃದ್ದಿ ಸಚಿವ, ವಿನಯ ಕುಮಾರ್ ಸೊರಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಐವನ್ ಡಿಸೋಜಾ, ಸಂಸದ ನಳೀನ್ ಕುಮಾರ್ ಕಟೀಲು, ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್.ರೊಡ್ರಿಗಸ್ ಬಾಗವಹಿಸುವರು.

By suddi9

Leave a Reply

Your email address will not be published. Required fields are marked *