Published On: Thu, Mar 19th, 2015

ಬದಲಾಗುತ್ತಿರುವ ಪೂಜೆ, ಉತ್ಸವಗಳು; ಬದಲಾಗದ ಕೆಟ್ಟ ಕಟ್ಟುಪಾಡುಗಳು

ಸಮಾಜದ ಎಲ್ಲಾ ಕ್ಷೇತ್ರಗಳು ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಂತೆ ಇಂದು ಧಾರ್ಮಿಕ, ವೈಧಿಕ ನೆಲೆಯಲ್ಲಿ ನಡೆಯುವ ಪೂಜೆ, ಉತ್ಸವಾದಿಗಳೂ ರೂಪಾಂತರಗೊಳ್ಳುತ್ತಿದೆ. ನಿಗದಿತ ಸಮಯಕ್ಕೆ ನಡೆಯಬೇಕಾದ ನಿತ್ಯ ಪೂಜೆಗಳು ಕೆಲವೆಡೆ ಮಾನವಾನುಕೂಲಕ್ಕೆ ತಕ್ಕ ಹಾಗೆ ಬದಲಾಗುತ್ತಿದ್ದರೆ ಬಹುತೇಕ ಉತ್ಸವಗಳು ಇದೀಗ ಹೆಸರು ಬದಲಾಯಿಸಿಕೊಂಡು ವೈಭವೀಕರಣಗೊಳ್ಳುತ್ತಿದೆ. ಮನೆ, ಮಂದಿರಗಳಿಗೆ ಸೀಮಿತವಾಗಿದ್ದ ಪೂಜೆ, ಉತ್ಸವಗಳು ಸ್ಪರ್ಧೆಯ ಸ್ವರೂಪದಲ್ಲಿ ಬೀದಿಗಿಳಿಯುತ್ತಿದೆ.
ಹೀಗೆ ಧಾರ್ಮಿಕ ಕ್ಷೇತ್ರದಲ್ಲಿ ಈ ಎಲ್ಲಾ ಬದಲಾವಣೆಗಳಿಗೆ ಸಾಧ್ಯತೆ ಇರುವುದಾದರೆ ಇದೇ ಧಾರ್ಮಿಕ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಮಾನವ ನಿರ್ಮಿತ, ಮನುಕುಲಕ್ಕೆ ಕಂಟಕವಾದ ಕೆಲವೊಂದು ಕೆಟ್ಟ ಕಟ್ಟುಪಾಡುಗಳು, ಸಂಪ್ರದಾಯಗಳು ಬದಲಾಗುತ್ತಿಲ್ಲ ಯಾಕೆ? ಎನ್ನುವುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
kattupadu1 copy
ಇತ್ತೀಚೆಗೆ ನಡೆಯುವ ಉತ್ಸವಗಳನ್ನೇ ಒಮ್ಮೆ ಗಮನಿಸೋಣ. ಹಿಂದೆ ದೇವಸ್ಥಾನಗಳಲ್ಲಿ ವರ್ಷಾವಧಿ ನಡೆಯುತ್ತಿದ್ದದ್ದು ಜಾತ್ರೆ. ಅದು ಇಡೀ ಊರಿಗೆ ಹಬ್ಬ. ಅರ್ಥಪೂರ್ಣವಾದ, ಔಚಿತ್ಯಪೂರ್ಣವಾದ, ಸಮಾಜದ ಎಲ್ಲಾ ವರ್ಗದ ಜನಸಮುದಾಯವನ್ನು ಒಂದೆಡೆ ಸೇರಿಸುವ ಮಹಾನ್ ಉದ್ದೇಶದ ಈ ಜಾತ್ರೆ ಎಂಬ ಪದವೇ ಈಗೀಗ ಕೆಲವೆಡೆ ಮಾಯವಾಗಿ ಉತ್ಸವ, ಮಹೋತ್ಸವ, ಜಾತ್ರೋತ್ಸವ, ಜಾತ್ರಾ ಮಹೋತ್ಸವವಾಗಿ ಕನ್ವರ್ಟ್ ಆಗಿದೆ. ಯಾಕೆಂದು ಕೇಳಿದರೆ ಯಾರಿಗೂ ಗೊತ್ತಿಲ್ಲ. ಕೆಲವರಿಗಂತೂ ಆ ಹೆಸರುಗಳ ಅರ್ಥವೇ ಗೊತ್ತಿಲ್ಲ. ದೊಡ್ಡ ಹೆಸರು, ದೊಡ್ಡ ಬ್ಯಾನರ್, ದೊಡ್ಡ ಪ್ರಚಾರವಿದೆಯೇ ಹೊರತು ಹಿಂದಿನ ಜಾತ್ರೆಯೇನೂ ಇಂದು ದೊಡ್ಡದಾಗಿಲ್ಲ. ಜಾತ್ರೆಯೂ ಕಿರಿದಾಗಿದೆ, ಜನಸಂಖ್ಯೆಯೂ ಕ್ಷೀಣವಾಗಿದೆ, ಮನಸ್ಸುಗಳೂ ದೂರವಾಗಿದೆ. ಆದರೆ ಪೈಪೋಟಿಗೆಂಬಂತೆ ಜಾತ್ರೆಯ ಹೆಸರುಗಳಷ್ಟೇ ಬದಲಾವಣೆಯಾಗುತ್ತಿದ್ದರೂ ಇದು ಯಾಕೆ? ಹೇಗೆ? ಇದಕ್ಕೆ ಅನುಮತಿ ನೀಡಿದವರ್ಯಾರು ಎಂದರೆ ಎಲ್ಲಿಯೂ ಉತ್ತರ ಇಲ್ಲ.
ಹಿಂದೆ ಕೋಲ ನೇಮವಾಗಿದ್ದದ್ದು ಕೋಲೋತ್ಸವ, ನೇಮೋತ್ಸವ-ಅಭಿಷೇಕ ಇದ್ದದ್ದು ಕಲಾಶಾಭಿಷೇಕ, ಮಹಾಕಲಾಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಬ್ರಹ್ಮಕಲಶ, ಬ್ರಹ್ಮಕಲಶೋತ್ವವ, ಬ್ರಹ್ಮಕಲಶ ಮಹೋತ್ಸವ….ಹೀಗೆ ಹೆಸರು ಬದಲಾಯಿಸಿಕೊಂಡಿದೆ. ಎಲ್ಲಾ ರಂಗದಲ್ಲೂ ಆಧುನಿಕತೆ ಪಸರಿಸಿದಂತೆ ವೈಧಿಕ ವಿಧಿವಿಧಾನಗಳಲ್ಲೂ ಇದು ಪ್ರಭಾವ ಬೀರಿದ್ದನ್ನು ಏನೆನ್ನಬೇಕೋ ಗೊತ್ತಿಲ್ಲ. ಕಾಲಕ್ಕೆ ತಕ್ಕ ಹಾಗೆ ನಡೆಯಬೇಕೆಂಬ ವಾದವೂ ತಪ್ಪಲ್ಲ. ಆದರೆ ಆಧುನಿಕತೆಯ ಭರಾಟೆಯಲ್ಲಿ ಉತ್ಸವ, ವೈಧಿಕ ವಿಧಿ ವಿಧಾನಗಳ ಹೆಸರಷ್ಟೇ ಬದಲಾವಣೆಯಾದರೆ ಸಾಕೇ? ಇವೆಲ್ಲಾ ಬದಲಾವಣೆಯಾಗುವಾಗ ಹಳೆಯ ಸಂಪ್ರದಾಯ, ಆಚರಣೆಗಳೂ ವೈಚಾರಿಕತೆ, ವೈಜ್ನಾನಿಕತೆ, ಹೊಸ ಚಿಂತನೆಯ ನೆಲೆಯಲ್ಲಿ ಬದಲಾಗಬೇಡವೇ? ಬದಲಾಗಬೇಕಿದ್ದರೆ ಬದಲಾಯಿಸುವವರು ಯಾರು? ಇನ್ನೂ ಹಳೆಯ ಸಂಪ್ರದಾಯಗಳಿಗೆ ಜೋತು ಬಿದ್ದಿರುವ ಕೆಲವು ದೇವಸ್ಥಾನಗಳ ಆಡಳಿತ ಮಂಡಳಿ, ಅರ್ಚಕ ವೃಂದ ಹಾಗೂ ಧರ್ಮ ನೇತಾರರೆನಿಸಿಕೊಂಡವರು ಕೆಟ್ಟದನ್ನು ಮುರಿದು ಹೊಸ ನೀತಿ ನಿಯಾಮಾವಳಿಗಳನ್ನು ರೂಪಿಸಲು ಮುಂದಾಗಬೇಕಿರುವುದು ಇಂದಿನ ಅನಿವಾರ್ಯವೂ ಹೌದು. ಐತಿಹಾಸಿಕ ಹಿನ್ನೆಲೆಯ, ಪಾಳು ಬಿದ್ದ ಕ್ಷೇತ್ರಗಳನ್ನು ಸಂಪೂರ್ಣ ನೆಲಸಮ ಮಾಡಿ ಏನನ್ನೂ ಕೇಳದ ದೇವನಿಗೆ ಅದ್ದೂರಿಯ ಬಿಲ್ಡಿಂಗ್ ಕಟ್ಟಿಕೊಡುವ ಈ ಜನಕ್ಕೆ ಯಾವುದೇ ದಾಖಲೆಗಳಿಲ್ಲದ ಮಡಿವಂತಿಕೆಯ ಕಟ್ಟುಪಾಡುಗಳನ್ನು ಇನ್ನೂ ಮುರಿಯಲು ಸಾಧ್ಯವಾಗುತ್ತಿಲ್ಲ ಎಂದರೆ ಇದು ನಿಜಕ್ಕೂ ಧಾರ್ಮಿಕ ದುರಂತ.
ಹಿಂದೆ ಸಾರ್ವಜನಿಕವಾಗಿ ಸತ್ಯನಾರಾಯಣ ಪೂಜೆ ಮಾತ್ರ ನಡೆಯುತ್ತಿದ್ದರೆ ಇಂದು ಅಲ್ಲಲ್ಲಿ ಸಾಮೂಹಿಕ ಶನೀಶ್ವರ ಪೂಜೆ, ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಮೂಹಿಕ ದುರ್ಗಾ ಪೂಜೆ, ಸಾಮೂಹಿಕ ರುದ್ರ ಪೂಜೆ ಸಹಿತ ಸಾಮೂಹಿಕ ಯಾಗ, ಹೋಮಗಳು ನಡೆಯುತ್ತಿದೆ. ಹೀಗೆ ನಾಮುಂದು, ತಾಮುಂದು ಎಂದು ಎಲ್ಲಾ ದೇವರುಗಳು ಒಂದಲ್ಲ ಒಂದು ರೀತಿಯಲ್ಲಿ ಬೀದಿಗಿಳಿದಿದ್ದಾರೆ, ಅರ್ಥಾತ್ ನಮ್ಮ ಜನ ದೇವರುಗಳನ್ನೂ ಗುಡಿಯಲ್ಲಿ ಸುಮ್ಮನಿರಲು ಬಿಡದೇ ಬೀದಿಗಿಳಿಸಿದ್ದಾರೆ. ಹಿಂದೆ ಮನೆಯಲ್ಲಿ ಪೂಜೆ ಮಾಡಿಸಲು ಶಕ್ತಿ ಇಲ್ಲದವರು ಸಾರ್ವಜನಿಕ ಆಚರಣೆಯಲ್ಲಿ ಪಾಲ್ಗೊಳ್ಳಬಹುದು, ಅಲ್ಲದೇ ಊರಿನ ಎಲ್ಲರೂ ಒಟ್ಟಾಗಿ ಒಂದೆಡೆ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುವ ಸದುದ್ಧೇಶದಿಂದ ಆಚರಣೆಗೆ ಬಂದ ಈ ಸಾಮೂಹಿಕ ಆಚರಣೆಗಳಾದರೂ ಇಂದು ಎತ್ತ ಸಾಗುತ್ತಿದೆ? ನಿಜಕ್ಕೂ ಇವೆಲ್ಲವೂ ಸಾಮೂಹಿಕ ಎಂಬ ಪದವನ್ನು ಸಾಕ್ಷೀಕರಿಸುತ್ತಿದೆಯೇ? ಸಮಾಜದ ಎಲ್ಲಾ ಜಾತಿ, ವರ್ಗದ ಜನ ಈ ಸಾಮೂಹಿಕ ಪೂಜೆಗಳಲ್ಲಿ ಭಾಗವಹಿಸದೇ ಇದ್ದಲ್ಲಿ ಇದಕ್ಕೆಲ್ಲಾ ಸಾಮೂಹಿಕ ಪೂಜೆ ಎಂಬ ಹಣೆಪಟ್ಟಿಯಾದರೂ ಯಾತಕ್ಕೆ? ಇದರ ಹಿಂದಿರುವ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಕಾಡುವುದು ಸಹಜವೇ.
ಸಂಘಟನೆಗೊಂದು, ಬೀದಿಗೊಂದು, ಪಕ್ಷಕ್ಕೊಂದು, ಗುಂಪಿಗೊಂದು ಎಂದು ಬೀದಿ ಬೀದಿಯಲ್ಲಿ ನಡೆಯುವ ಈ ಸಾಮೂಹಿಕ ಆಚರಣೆಗಳ ಅಬ್ಬರಗಳ ಹಿಂದಿರುವುದು ಭಕ್ತಿಯೋ, ಪ್ರತಿಷ್ಠೆಯೋ ಗೊತ್ತಾಗುತ್ತಿಲ್ಲ. ಈ ರೀತಿ ಅಲ್ಲಲ್ಲಿ ನಡೆಯುವ ಸಾಮೂಹಿಕ ಆಚರಣೆಗಳನ್ನೇ ಪರಿಗಣಿಸಿಕೊಂಡು ಸ್ವಾಮೀಜಿಗಳು, ಧರ್ಮ ನೇತಾರರು ” ಇಂದು ಭಕ್ತಿ ಹೆಚ್ಚಾಗಿದೆ, ಧರ್ಮ ಜಾಗೃತಿಯಾಗಿದೆ, ಸಂಸ್ಕಾರ ಬೆಳೆಯುತ್ತಿದೆ” ಎಂದು ಯಾಕೆ ಭಾಷಣ ಬಿಗಿಯುತ್ತಾರೋ ಗೊತ್ತಿಲ್ಲ. ನಿಜಕ್ಕೂ ಇಂದು ನಡೆಯುವ ಸಾಮೂಹಿಕ ಆಚರಣೆಗಳು ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆಯೇ? ಅಥವಾ ಧಾರ್ಮಿಕ ಅವನತಿಗೆ ಕಾರಣವಾಗುತ್ತಿದೆಯೇ ಎಂದು ಯೋಚನೆ ಮಾಡಬೇಕಾದ ಅಗತ್ಯವಿದೆ. ಯಾಕೆಂದರೆ ಊರಿನ ಬಹುತೇಕ ಉತ್ಸವಗಳು ಇಂದು ಜಾತಿ, ಧರ್ಮ, ವರ್ಗ, ಪಕ್ಷ, ಗುಂಪುಗಳ ಲೇಪನವನ್ನು ಮೆತ್ತಿಕೊಂಡಿದ್ದು ಹೆಸರಿಗಷ್ಟೇ ಸಾಮಾಹಿಕವಾಗಿದ್ದರೂ ಅದು ನಿಜಾರ್ಥದಲ್ಲಿ ಆ ಊರಿನ ಎಲ್ಲಾ ಜನಸಮುದಾಯವನ್ನು ಒಳಗೊಂಡಿರುವುದಿಲ್ಲ. ಎಲ್ಲರನ್ನೂ ಒಂದೆಡೆ ಒಟ್ಟುಗೂಡಿಸಬೇಕಾದ ಉತ್ಸವಗಳಲ್ಲಿ ಎಲ್ಲಾ ಜಾತಿ, ವರ್ಗ, ಪಕ್ಷ, ಪಂಗಡಗಳು ಸಮಾನವಾಗಿ ಪಾಲ್ಗೊಳ್ಳುತ್ತಿಲ್ಲ.
ಹಿಂದೆ ನಾಲ್ಕೂರಿಗೊಂದು ಗಣೇಶೋತ್ಸವ, ಶಾರದೋತ್ಸವ ನಡೆಯುತ್ತಿದ್ದರೆ ಈಗ ಇದೆಲ್ಲಾ ಬೀದಿ ಬೀದಿಯಲ್ಲಿ ಗಮನ ಸೆಳೆಯುತ್ತಿದೆ. ಒಂದು ವರ್ಗ ಗಣೇಶೋತ್ಸವ ನಡೆಸಿದರೆ ಮತ್ತೊಂದು ವರ್ಗ ಅದೇ ಊರಲ್ಲಿ ಶಾರದೋತ್ಸವ ಮಾಡುತ್ತಾ ನಾವೇನೂ ಕಡಿಮೆಯಿಲ್ಲ ಎಂದು ತೋರಿಸುವಷ್ಟರ ಮಟ್ಟಕ್ಕೆ ನಮ್ಮ ಉತ್ಸವಗಳು ಬೆಳೆಯಲಾರಂಭಿಸಿದೆ. ಕೆಲವಡೆಯಂತೂ ಗಣೇಶೋತ್ಸವಕ್ಕೆ ಎದುರಾಗಿ ಮತ್ತೊಂದು ಗಣೇಶೋತ್ಸವ, ಶಾರದೋತ್ಸವಕ್ಕೆ ಎದುರಾಗಿ ಮತ್ತೊಂದು ಶಾರದೋತ್ಸವ………ದೇವರುಗಳು ಒಂದೇ.ಭಕ್ತರೂ ಒಂದೇ. ಮಾಡಿಸುವ ಜನರು ಮಾತ್ರ ಬೇರೆ. ಎಲ್ಲದಕ್ಕೂ ಡೊನೇಶನ್ ಮಾತ್ರ ಅದೇ ಊರಿನ ಜನರದ್ದು.
ದುಡ್ಡು ಕೊಡಲೇ ಬೇಕು?:
ಸಾಲ ಸೂಲ ಮಾಡಿಯಾದರೂ ಸರಿ ಹಳ್ಳಿ ಜನ ಸಾಮೂಹಿಕ ಪೂಜೆ, ಉತ್ಸವಗಳಿಗೆ ಕಾಣಿಕೆ ನೀಡಲೇ ಬೇಕು. ಮನೆಗೊಂದು, ಕೆಲವೆಡೆ ತಲೆಗೊಂದು ಪೂಜೆ ಬರೆಸಲೇ ಬೇಕು. ಪಾಪ ಆ ಮನೆಯಲ್ಲಿ ಮೂರು ಹೊತ್ತಿನ ತುತ್ತಿಗೆ, ಮಕ್ಕಳ ವಿದ್ಯೆಗೆ, ಹಿರಿಯರ ಆರೋಗ್ಯಕ್ಕೆ ಹಣ ವಿಲ್ಲದಿದ್ದರೂ ಚಿಂತೆ ಇಲ್ಲ. ಆದರೆ ಪೂಜೆ, ಉತ್ಸವ, ಕೋಲ, ನೇಮ, ತಂಬಿಲದ ದುಡ್ಡನ್ನು ಬಾಕಿ ಇರಿಸುವಂತಿಲ್ಲ. ಕೊಡಲು ಶಕ್ತಿ ಇಲ್ಲದಿದ್ದರೂ ಅರ್ಚಕರ, ಸಂಘಟಕರ ಶಾಪದ ಭಯದಿಂದಲೋ, ದೇವರ ಮೇಲಿನ ಭಕ್ತಿಯಿಂದಲೋ ಕೊಡದೇ ವಿಧಿಯಿಲ್ಲ. ಪೂಜೆ, ಧರ್ಮ, ದೇವರ ಹೆಸರಿನಲ್ಲಿ ಕೊಟ್ಟ ದುಡ್ಡಿಗೆ ಬಡ್ಡಿ ಕಟ್ಟಿ ಹೈರಾಣಾದ ಅದೆಷ್ಟೋ ಕುಟುಂಬಗಳು ಹಳ್ಳಿಗಳಲ್ಲಿದೆ. ನಾವೇಷ್ಟು ಕೊಟ್ಟರೂ ದೇವರು ನಮಗೇನೂ ಕೊಟ್ಟಿಲ್ಲ ಎಂಬ ಮಾತು ಇಂತಹವರಿಂದ ಕೇಳಿ ಬರುತ್ತಿದೆ.
ನಿಜಕ್ಕೂ ಇವರು ಕೊಟ್ಟದ್ದಾದರೂ ಯಾರಿಗೆ? ದೇವರಿಗೆ ಇದೆಲ್ಲಾ ಬೇಕಿತ್ತೇ? ದೇವರು, ಧರ್ಮ, ಉತ್ಸವ, ಪೂಜೆಗಳ ಹೆಸರಿನಲ್ಲಿ ಬಡ ಜನರನ್ನು ದೋಚುತ್ತಿರುವ ಮಂದಿಗೆ ಇನ್ನೂ ಇದೆಲ್ಲಾ ಅರ್ಥವಾಗುತ್ತಿಲ್ಲ ಯಾಕೆ? ಇದ್ದವರು ಕೊಡಲಿ ಬಿಡಿ. ಇಲ್ಲದವರೂ ಕೊಡಬೇಕೆಂಬ ಆದೇಶ ನೀಡಲು ಇವರ್ಯಾರು? ದೇವರ ಏಜಂಟರೇ?
ಇದನ್ನೆಲ್ಲಾ ನೋಡಿ ದೇವರುಗಳು( ಇದ್ದರೆ) ಅಳಬಹುದೋ, ನಗಬಹುದೋ ಗೊತ್ತಿಲ್ಲ. ಅಂತೂ ಮನೆ, ಗುಡಿ, ಮಠ, ಮಂದಿರ, ದೇವಾಲಯಗಳಿಗೆ ಸೀಮಿತವಾಗಿದ್ದ ದೇವರುಗಳು, ಉತ್ಸವಗಳು ಒಂದಲ್ಲೊಂದು ವಿಧದಲ್ಲಿ ಬೀದಿ ಪಾಲಾಗಿದ್ದಂತೂ ಖಂಡಿತ. ಯಾಕೆ ಹೀಗೆ? ಇದು ಭಕ್ತಿಯೋ, ಭಕ್ತಿಯ ಪರಾಕಾಷ್ಠೆಯೋ, ಆಧುನಿಕತೆಯ ಪ್ರಭಾವವೋ, ಪ್ರತಿಷ್ಠೆಯೋ, ರಾಜಕೀಯದಾಟವೋ, ವ್ಯಾಪಾರವೋ? ಗೊತ್ತಿಲ್ಲ. ದೇವರೇ ಉತ್ತರ ನೀಡಬೇಕು. ಆದರೆ ಎಲ್ಲವನ್ನೂ ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ಈ ಮಾನವ ದೇವರನ್ನೂ, ದೇವರ ಹೆಸರಿನಲ್ಲಿದ್ದ ಉತ್ಸವಗಳನ್ನೂ ಈ ರೀತಿ ಬಳಸಿಕೊಳ್ಳುತ್ತಾನೆಂದರೆ, ಇದನ್ನು ತಡೆಯುವರ್ಯಾರು?
ಕೆಟ್ಟಪಾಡುಗಳು ಬದಲಾಗಿಲ್ಲ ಯಾಕೆ?:
ಕಾಲಕ್ಕೆ ತಕ್ಕ ಹಾಗೆ ಎಲ್ಲವೂ ಬದಲಾವಣೆಯಾಗುತ್ತದೆ, ಬದಲಾವಣೆ ಜಗದ ನಿಯಮ ಎಂದು ಒಪ್ಪೊಣ. ಆದರೆ ದೇವರು, ದೈವ, ಉತ್ಸವ, ದೇವಸ್ಥಾನಗಳ ಸುತ್ತ ಮೂಲನಂಬಿಕೆಯ ಹೆಸರಿನಲ್ಲಿ ಪರಾಂಪರಗತವಾಗಿ ಅಂಟಿಕೊಂಡು ಬಂದ ಕೆಲವು ಮೂಡನಂಬಿಕೆಗಳನ್ನು, ಹೆಣ್ಣು-ಗಂಡುಗಳೆಂಬ ತಾರತಮ್ಯವನ್ನು, ಮಡಿವಂತಿಕೆಯ ಕಟ್ಟುಪಾಡುಗಳನ್ನು, ಶುದ್ಧ-ಅಶುದ್ಧದ ಅಮಾನವೀಯ ಆಚರಣೆಗಳನ್ನು ಬದಲಾಯಿಸಲು ಸಾಧ್ಯವಾಗಿಲ್ಲ ಯಾಕೆ? ದೇವಸ್ಥಾನದ ನಿರ್ಮಾಣ, ಉತ್ಸವದ ಹೆಸರಿನಲ್ಲಿ ಮಾನವ ಬದುಕಿಗೆ ಉಸಿರಾಗಿರುವ ಹಸಿರು ಪರಿಸರದ ನಾಶವಾಗುವುದನ್ನು ತಡೆಯಲು ಆಗುತ್ತಿಲ್ಲ ಯಾಕೆ? ಏನನ್ನೂ ಕೇಳದ ದೇವನಿಗೆ ಎಲ್ಲವನ್ನೂ ಕೊಡಬೇಕೆನ್ನುವ ಅಬ್ಬರದಲ್ಲಿ ಬಡವರ ಷೋಷಣೆಯಾಗುವುದನ್ನು ಇನ್ನೂ ನಿಲ್ಲಿಸಲು ಸಾಧ್ಯವಾಗಿಲ್ಲ ಯಾಕೆ? ದೇವಸ್ಥಾನಗಳ ಉತ್ಸವ-ಪೂಜಾದಿಗಳ ಸಮಾರಂಭಗಳಲ್ಲಿ ಎಲ್ಲಾ ಜಾತಿ, ವರ್ಗದವರಿಗೆ ಇನ್ನೂ ಸಮಾನ ವೇದಿಕೆ ಸಿಗುತ್ತಿಲ್ಲ ಯಾಕೆ? ದೇವಸ್ಥಾನ, ಪೂಜೆ, ಉತ್ಸವಗಳ ಯಶಸ್ವಿಗಾಗಿ ಹಗಲಿರುಳು ಶ್ರಮ ವಹಿಸುವ ಶ್ರಮ ಜೀವಿಗಳಿಗೆ ಇನ್ನೂ ಸಮಾನ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಯೋಗ ಬಂದಿಲ್ಲ ಯಾಕೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ತೆರೆದುಕೊಳ್ಳುತ್ತಿದೆ.
ಎಲ್ಲವೂ ಬದಲಾವಣೆಗೆ ತೆರೆದುಕೊಳ್ಳಬಹುದಾದರೆ ಮಾನವನೇ ದೇವರೇ ಹೆಸರಿನಲ್ಲಿ ನಿರ್ಮಿಸಿದ ಕೆಲವು ಕೆಟ್ಟ ಕಟ್ಟುಪಾಡುಗಳನ್ನು ಇನ್ನೂ ಬದಲಾಯಿಸಲು ಸಾಧ್ಯವಾಗದಿರುವುದಕ್ಕೆ ಏನೆನ್ನೋಣ. ನೀವೇ ಹೇಳಿ.
ಗೋಪಾಲ ಅಂಚನ್
ರಂಗ ನಿರ್ದೇಶಕರು-ತರಬೇತುದಾರರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter